ರಾಜ್ಯ

ನಗರದ ಆರು ಕಡೆ ಬ್ಲ್ಯಾಕ್ ಫಂಗಸ್ ಸೋಂಕಿಗೆ ಉಚಿತ ಚಿಕಿತ್ಸೆ: ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ

Srinivasamurthy VN

ಬೆಂಗಳೂರು: ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸಿಕೊಳ್ಳುತ್ತಿರುವ ಮಾರಣಾಂತಿಕ ಬ್ಲ್ಯಾಕ್ ಫಂಗಸ್ ಸೋಂಕಿಗೆ ನಗರದ ಆರು ಕಡೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಕೋವಿಡ್‌ ಸೋಂಕು ತಗಲಿ ಮನೆಯಲ್ಲೇ ಪ್ರತ್ಯೇಕವಾಗಿ (ಹೋಮ್‌ ಐಸೋಲೇಷನ್‌) ಇರುವವರಿಗೆ ಬಂಟರ ಸಂಘ ವ್ಯವಸ್ಥೆ ಮಾಡಿರುವ 20 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದ ಅವರು, 'ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ರೋಗಕ್ಕೆ ಬಳಸುವ ಔಷಧಿಗೆ  ಕೊರತೆ ಇಲ್ಲ. ಈಗಾಗಲೇ ಕೇಂದ್ರದಿಂದ 1000 ವೈಯಲ್ಸ್‌ ಬಂದಿದೆ. ಈ ಔಷಧಿಯ ಕೊರತೆ ನೀಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

ಇದೇ ವೇಳೆ "ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಕಪ್ಪು ಶಿಲೀಂಧ್ರ ರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ' ಎಂದರು.

ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ ಅವರು, ''ಬಂಟರ ಸಂಘ ಬೆಂಗಳೂರು' ಆಯೋಜಿಸಿರುವ ಆಕ್ಸಿಜನ್ ಅಭಿಯಾನಕ್ಕೆ ಚಾಲನೆ ನೀಡಿದೆ. ಅಗತ್ಯವಿರುವವರಿಗೆ #OxygenConcentrators ಪೂರೈಸುವ ಈ ಉಪಕ್ರಮದ ಮೂಲಕ ಕೋವಿಡ್ ಸೋಂಕಿತರ ಆರೈಕೆಗೆ  ನೆರವಾಗಲಿದೆ. ಕೋವಿಡ್-19 ವಿರುದ್ಧದ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿರುವ ಸಮುದಾಯಗಳ ಇಂತಹ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟ್ ಮಾಡಿದ್ದಾರೆ.

ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ, ಉಮೇಶ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಲೂರು, ಸಂಘದ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ. ನಿಶಾಕಾಂತ್ ಶೆಟ್ಟಿ ಇದ್ದರು.
 

SCROLL FOR NEXT