ರಾಜ್ಯ

ಗ್ರಾಮೀಣ ಭಾಗಗಳಲ್ಲಿ ಹೆಚ್ಚಿದ ಕೊರೋನಾ: ಮೊಬೈಲ್ ಘಟಕಗಳ ಆರಂಭಕ್ಕೆ ಸರ್ಕಾರ ಚಿಂತನೆ

Manjula VN

ಬೆಂಗಳೂರು: ನಗರ ಬಳಿಕ ಇದೀಗ ಗ್ರಾಮೀಣ ಭಾಗಗಳಲ್ಲಿ ಮಹಾಮಾರಿ ಕೊರೋನಾ ವ್ಯಾಪಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್ ಘಟಕಗಳ ಮೂಲಕ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ವಾರಕ್ಕೆ 1,500 ಗ್ರಾಮಸ್ಥರನ್ನು ತಲುಪುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತೀ ಜಿಲ್ಲೆಗೆ 15-20 ವಾಹನಗಳು ತೆರಳಲಿದ್ದು, ಪ್ರತೀ ವಾಹನವು ವಾರದಲ್ಲಿ 3 ಗ್ರಾಮಗಳ ತಲುಪಲಿದೆ. ಪ್ರತೀನಿತ್ಯ ಗ್ರಾಮಗಳಿಗೆ ತೆರಳುವ ಈ ವಾಹನಗಳು ಸಂಜೆ ವೇಳೆಗೆ ಜಿಲ್ಲಾ ಪ್ರಧಾನ ಕಚೇರಿಗಳಿಗೆ ವಾಪಸ್ಸಾಗಲಿವೆ. ಆರಂಭಿಕ ಹಂತದಂತೆ ಕಳೆದ ವಾರ ಬೆಂಗಳೂರು ಗ್ರಾಮೀಣ ಭಾಗಕ್ಕೆ 15 ವಾಹನಗಳನ್ನು ಬಿಡಲಾಗಿದೆ. 

ಪ್ರತೀ ವಾಹನದಲ್ಲಿ ಓರ್ವ ವೈದ್ಯ, ಮೂವರು ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಚಾಲಕ ಇರುತ್ತಾರೆ. ಇದಲ್ಲದೆ, ವಾಹನದಲ್ಲಿ ಸ್ಟೀಮಿಂಗ್ ಯಂತ್ರ, ಆರ್'ಎಟಿ, ಪಿಪಿಇ ಕಿಟ್ ಗಳು, ಆಕ್ಸಿಮೀಟರ್'ಗಳು, ಥರ್ಮಾಮೀಟರ್'ಗಳು ಹಾಗೂ ಔಷಧಿಗಳು ಕೂಡ ಸಂಗ್ರಹ ಇರಲಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು, ಈಗಾಗಲೇ ಇಲಾಖೆ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಕೊರೋನಾ ಸೋಂಕು ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ. 

ಈ ಮೊಬೈಲ್ ಘಟಕಗಳು ಕೇವಲ ಸೋಂಕಿತರಿಗೆ ಚಿಕಿತ್ಸೆ ಹಾಗೂ ಔಷಧಿಗಳನ್ನಷ್ಟೇ ನೀಡುವುದಿಲ್ಲ. ಸೋಂಕಿತ ವ್ಯಕ್ತಿಗಳಿಗೆ ಕೌನ್ಸಿಲಿಂಗ್ ಕೂಡ ನಡೆಸಲಿದೆ ಎಂದು ತಿಳಿಸಿದ್ದಾರೆ. 

ಇದೇ ರೀತಿಯ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2,500 ಪಿಜಿ ಹಾಗೂ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಲಾಗಿದೆ. ಇದನ್ನು ಅಂತಿಮ ವರ್ಷದ ಹೌಸ್ ಇಂಟರ್ನ್ ಶಿಪ್ ಎಂದು ಪರಿಗಣಿಸಿ, ಪ್ರಮಾಣಪತ್ರವನ್ನೂ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT