ರಾಜ್ಯ

ಶಾಸಕ ಎಟಿ ರಾಮಸ್ವಾಮಿ ಅವರಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅಸ್ಥಿ ವಿಸರ್ಜನೆ

Shilpa D

ರಾಮನಾಥಪುರ(ಹಾಸನ): ಇತ್ತೀಚೆಗೆ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ಅಸ್ಥಿ ವಿಸರ್ಜನೆ ಕಾರ್ಯವನ್ನು ಅವರ ಆಪ್ತ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ನೆರವೇರಿಸಿದ್ದಾರೆ.

ಗುರುವಾರ ಕಾವೇರಿ ನದಿ ತೀರದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಗಾಂಧಿವಾದಿ ದೊರೆಸ್ವಾಮಿ ಅವರ ಅಸ್ಥಿ ವಿಸರ್ಜನೆ ಮಾಡಿದ್ದಾರೆ, ಮತ್ತೊಂದು ಆಸಕ್ತಿದಾಕ ವಿಷಯವೆಂದರೇ ರಾಮಸ್ವಾಮಿ ಅವರು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಾವೇರಿ ನದಿ ಮಲಿನವಾಗುತ್ತದೆ ಎಂಬ ಕಾರಣಕ್ಕೆ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಿಲ್ಲ, ಬದಲಿಗೆ ರಾಮೇಶ್ವರ
ದೇವಾಲಯದ ಎದುರಿರುವ ತೆಂಗಿನ ಮರ ಮತ್ತು ತಮ್ಮ ಮನೆಯ ಎದುರಿರುವ ತೆಂಗಿನ ಮರಗಳಿಗೆ ಹಾಕಿದ್ದಾರೆ.

ಹಲವರು ದೊರೆಸ್ವಾಮಿ ಅವರಿಗೆ ಆಮೀಷ ಒಡ್ಡುವ ಮೂಲಕ ರಾಜಿಮಾಡಿಕೊಳ್ಳಲು ಪ್ರಯತ್ನಿಸಿದರೂ, ಆದರೆ ಅವರು ಯಾವತ್ತೂ ಅದಕ್ಕೆ ಬಗ್ಗಲಿಲ್ಲ, ಅಹಿಂಸೆ ಮತ್ತು ಶಾಂತಿ ಮೂಲಕ ಅವರು ತಮ್ಮ ಹೋರಾಟ ನಡೆಸಿದ್ದರು ಎಂದು ರಾಮಸ್ವಾಮಿ ತಿಳಿಸಿದ್ದಾರೆ.

ಸಾಯುವ ಮುನ್ನ ನನಗೆ ಕರೆ ಮಾಡಿ ಉತ್ತರಾಧಿಕಾರಿಯಾಗಿ ಎಂದು ಮನವಿ ಮಾಡಿದರು. ಆದರೆ ಅವರ ಭಾವನೆಗಳನ್ನು ಪೂರೈಸುವಷ್ಟು ನಾನು ದೊಡ್ಡವನಲ್ಲ. ಅವರ ಆಶಯವನ್ನು ಸ್ವಲ್ಪಮಟ್ಟಿಗಾದರೂ ಪೂರೈಸುವ ಕೆಲಸ ಮಾಡಬಹುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ದೊರೆಸ್ವಾಮಿ ಅವರು, ಭ್ರಷ್ಟಾಚಾರದ ವಿರುದ್ದ ದನಿ ಎತ್ತಿದಾಗ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದರು. ಅವರ ಜೊತೆ ನಾನು ಸುಮಾರು 31 ದಿನ ಅಹೋರಾತ್ರಿ ಧರಣೆ ನಡೆಸಿದ್ದೇನೆ. ಅಂತಹ ದೇಶಭಕ್ತನ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದರು. ರಾಜ್ಯ ಇನ್ನೆಂದೂ ಅವರಂತಹ ಹೋರಾಟಗಾರನನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT