ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು ಎರಡನೇ ಡೋಸ್ ಗಾಗಿ ಕಾದು ಕುಳಿತಿರುವವರಿಗೆ ಆದ್ಯತೆ ಮೇರೆಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಾನುಭವಿಗಳಾಗಿದ್ದು, ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಸಾಧ್ಯವಾಗದವರು ಬಿಬಿಎಂಪಿ ಅಧಿಕಾರಿಗಳನ್ನು ದಾಖಲೆಗಳೊಂದಿಗೆ ಸಂಪರ್ಕಿಸಬಹುದು. ನಂತರ ಬಿಬಿಎಂಪಿ ಆದ್ಯತೆ ಮೇರೆಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಿದೆ ಎಂದು ಹೇಳಿದ್ದಾರೆ.
ಜನವರಿ 15 ರಿಂದ ಲಸಿಕೆ ಅಭಿಯಾನ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ 25 ಲಕ್ಷ ನಾಗರೀಕರು ಲಸಿಕೆ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚೆಚ್ಚು ಜನರಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಾದ್ಯಂತ ನಡೆಸಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಕೋವಿಡ್ ಪೋರ್ಟಲ್ ನಲ್ಲಿ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ದೂರುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಬಿಎಂಪಿ ವೆಬ್ ಸೈಟ್ ನಲ್ಲಿ ಈ ಮೊದಲು ಎಸ್ಆರ್'ಎಫ್ ಸಂಖ್ಯೆ ಇದ್ದರೆ ಯಾರೂ ಬೇಕಾದರೂ ಕೋವಿಡ್ ವರದಿ ಪಡೆಯಬಹುದಿತ್ತು. ಜನರಿಗೆ ಅನುಕೂಲವಾಗಲಿ ಎಂದು ಈ ವ್ಯವಸ್ಥೆ ಜಾರಿಗೆ ತಂದಿದ್ದೆವು. ಅದು ದುರ್ಬಳಕೆಯಾಗುತ್ತಿದೆ ಎನ್ನುವುದು ಇದೀಗ ಗಮನಕ್ಕೆ ಬಂದಿದೆ. ಸದ್ಯಕ್ಕೆ ಆನ್'ಲೈನ್ ನಲ್ಲಿ ಕೋವಿಡ್ ಪರೀಕ್ಷೆ ನೋಡುವ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಯಾರಾದರೂ ಕೋವಿಡ್ ಪರೀಕ್ಷೆ ವರದಿ ನೋಡಬೇಕಾದರೆ ಎಸ್ಆರ್'ಎಫ್ ಸಂಖ್ಯೆ ದಾಖಲಿಸಿ ಕೂಡಲೇ ಸಂಬಂಧಪಟ್ಟವರ ಮೊಬೈಲ್'ಗೆ ಒಟಿಪಿ ಹೋಗಲಿದೆ ಎಂದು ಹೇಳಿದ್ದಾರೆ.