ರಾಜ್ಯ

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದುಬಾರಿ, ಕನಿಷ್ಠ ದರ 25 ರಿಂದ 30 ರೂ. ಗೆ ಏರಿಕೆ

Lingaraj Badiger

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಲಾಗಿದ್ದು, ನಗರದಲ್ಲಿ ಕನಿಷ್ಠ ಆಟೋ ದರವನ್ನು(ಎರಡು ಕಿಲೋಮೀಟರ್ ಗೆ) 25 ರೂಪಾಯಿಂದ 30 ರೂಪಾಯಿಗೆ ಹೆಚ್ಚಿಸಲಾಗಿದೆ.

ಮೊದಲ ಎರಡು ಕಿಲೋಮೀಟರ್ ಗೆ 30 ರುಪಾಯಿ ನಿಗದಿ ಮಾಡಿದ್ದು, ನಂತರ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ಹೆಚ್ಚುವರಿ ದರ ನಿಗದಿಯಾಗಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.

ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದೆ.

20 ಕೆಜಿ ಮೇಲ್ಪಟ್ಟ ಲಗೇಜ್‌ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ. ಪರಿಷ್ಕೃತ ದರ ಹೆಚ್ಚಳದ ಕುರಿತು ಮೀಟರ್​ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್​ಗಳನ್ನ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ. ಅಷ್ಟರೊಳಗೆ ಮೀಟರ್ ಬದಲಾವಣೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿದೆ.

ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರ ಹೆಚ್ಚಳವಾಗಿದೆ. ಈ ದರ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಅನ್ವಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿರುವ ನಿಗದಿತ ದರದ ಪಟ್ಟಿಯನ್ನು ಎಲ್ಲಾ ಆಟೋ ಚಾಲಕರು ಆಟೋದ ಪ್ರಮುಖ ಸ್ಥಳದಲ್ಲಿ ಅಂಟಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

SCROLL FOR NEXT