ರಾಜ್ಯ

ಅಪ್ಪು ಅಮರ ಶ್ರೀ, ಅಭಿಮಾನಿಗಳು ಪ್ರಾಣ ಕಳೆದುಕೊಳ್ಳಬೇಡಿ: ಶಿವಣ್ಣ ಕರೆ

Nagaraja AB

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದ್ದು, ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಬಳಿ ಅವರಿಗೆ ಇಷ್ಟವಾದ ಆಹಾರ ತಿನಿಸುಗಳ ಎಡೆ ಇಡುವ ಮೂಲಕ ಕುಟುಂಬಸ್ಥರು ಹಾಗೂ ಆಪ್ತರು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಿವರಾಜ್ ಕುಮಾರ್,  ನೋವಿನೊಂದಿಗೆ 11ನೇ ಪುಣ್ಯ ಸ್ಮರಣೆ ಕಾರ್ಯ ಮಾಡುತ್ತಿದ್ದೀವಿ. ಇಂದು ಸದಾಶಿವನಗರದ ನಿವಾಸದಲ್ಲಿ ಸಂಪ್ರದಾಯದ ಪ್ರಕಾರ, ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತಿದೆ. ನಾಳೆ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಅಪ್ಪು ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗಿಂತ 13 ವರ್ಷ ಕಡಿಮೆ ವಯಸ್ಸಿನ ಅಪ್ಪುವನ್ನು ಕಳೆದುಕೊಂಡು ನನ್ನ ಮಗನನ್ನು ಕಳೆದುಕೊಂಡಂತಾಗಿದೆ. ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದ ಅಪ್ಪು, ತಂದೆಗೆ ತಕ್ಕ ಮಗನಾಗಿದ್ದರು.  ಅವರ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನಕ್ಕೆ ಬೆಲೆ ಕಟ್ಟಲಾಗದು, ಯಾರೂ ಕೂಡಾ ಪ್ರಾಣ ಕಳೆದುಕೊಳ್ಳಬಾರದು, ಅಪ್ಪು ದಾರಿಯಲ್ಲಿ ಸಾಗಬೇಕು, ಸಾಧ್ಯವಾದರೆ ಅವರಂತೆಯೇ ಶಿಕ್ಷಣ, ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ಕುರಿತಂತೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಅಮರವಾಗಿದ್ದು, ಅವರು ಅಮರಶ್ರೀಯಾಗಿ ಉಳಿದಿದ್ದಾರೆ. ಪದ್ಮಶ್ರೀ, ಪದ್ನವಿಭೂಷಣ ಯಾವುದೇ ಪ್ರಶಸ್ತಿಯಾದರೂ ಕೇವಲ ಟೈಟಲ್ ಆಷ್ಟೇ. ಅದಕ್ಕಿಂತಲೂ ಉನ್ನತವಾದ ಸ್ಥಾನವನ್ನು ಅಪ್ಪು ಪಡೆದಿದ್ದಾರೆ. ಅಭಿಮಾನಿಗಳಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಭಾವುಕರಾದರು.

SCROLL FOR NEXT