ರಾಜ್ಯ

ಕರ್ನಾಟಕದಲ್ಲಿ ಸದ್ಯದಲ್ಲಿಯೇ ಮತಾಂತರ ವಿರೋಧಿ ಕಾನೂನು ಜಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕರ್ನಾಟಕ ಸರ್ಕಾರ ಸದ್ಯದಲ್ಲಿಯೇ ಮತ ಅಥವಾ ಧರ್ಮ ಪರಿವರ್ತನೆ ವಿರೋಧಿ ಕಾನೂನನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಪರಿವರ್ತನೆ ವಿರೋಧಿ ಕಾನೂನನ್ನು ಜಾರಿಗೆ ತಂದ ಬೇರೆ ರಾಜ್ಯಗಳ ಸಂಬಂಧಪಟ್ಟ ಕಾನೂನನ್ನು ರಾಜ್ಯ ಸರ್ಕಾರ ಅಧ್ಯಯನ ಮಾಡಿ ಸದ್ಯದಲ್ಲಿಯೇ ಧರ್ಮ ಪರಿವರ್ತನೆ ವಿರೋಧಿ ಶಾಸನವನ್ನು ರಚಿಸಲಿದೆ ಎಂದು ತಿಳಿಸಿದ್ದಾರೆ.

ಧರ್ಮ ಪರಿವರ್ತನೆಗೆ ನಿಷೇಧ ಹೇರಬೇಕೆಂದು ಹಲವು ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅವರ ಜೊತೆ ನಡೆಸಿದ ಮಾತುಕತೆಯ ಬಗ್ಗೆ ಸುದ್ದಿಗಾರರಿಗೆ ಬಸವರಾಜ ಬೊಮ್ಮಾಯಿ ವಿವರಣೆ ನೀಡಿದರು. 

ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ್ ಗೌಡ ಮಾಹಿತಿ ನೀಡಿ, 50ಕ್ಕೂ ಹೆಚ್ಚು ಹಿಂದೂ ಮಠಾಧೀಶರು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಧರ್ಮ ಪರಿವರ್ತನೆ ವಿರೋಧಿ ಕಾನೂನು ಜಾರಿಗೆ ತರುವಂತೆ ಒತ್ತಡ ಹೇರಿದ್ದಾರೆ. 

ಆಮಿಷವೊಡ್ಡುವುದು ಸೇರಿದಂತೆ ಬಲವಂತದ ಮತಾಂತರಕ್ಕೆ ಸಂವಿಧಾನ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ನಿನ್ನೆ ಖಡಾಖಂಡಿತವಾಗಿ ಹೇಳಿದ್ದಾರೆ.

ನಂತರ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಂತೋಷ್ ಗುರೂಜಿ, ಸಿದ್ದಲಿಂಗ ಸ್ವಾಮಿ, ಪ್ರಣವಾನಂದ ಸ್ವಾಮಿಗಳು ಪ್ರತಿನಿಧಿಗಳಾಗಿದ್ದಾರೆ ಎಂದು ಮೋಹನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಧಾರ್ಮಿಕ ಮತಾಂತರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದು, ರಾಜ್ಯದಲ್ಲಿ ಹಲವು ಅಕ್ರಮ ಚರ್ಚ್‌ಗಳು ತಲೆಯೆತ್ತುತ್ತಿವೆ ಎಂದಿದ್ದಾರೆ. 

ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾದ ವಿಶೇಷ ಸೌಲಭ್ಯಗಳನ್ನು ಮತಾಂತರಕ್ಕೆ ನಿರಾಕರಿಸಬೇಕು ಎಂದು ಪ್ರತಿನಿಧಿಗಳು ಒತ್ತಾಯಿಸಿದರು.

SCROLL FOR NEXT