ರಾಜ್ಯ

ಪೊಲೀಸರಿಂದ ಹಲ್ಲೆಗೊಳಗಾಗಿ ಮಾನಸಿಕ ಅಸ್ವಸ್ಥ ಸಾವು: ಕೊಡಗು ಎಸ್‌ಪಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Lingaraj Badiger

ಮಡಿಕೇರಿ: ಪೊಲೀಸರಿಂದ ಹಲ್ಲೆಗೊಳಗಾಗಿ ಮಾನಸಿಕ ಅಸ್ವಸ್ಥ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಬುಧವಾರ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ನೋಟಿಸ್ ನೀಡಿದೆ.

ಮಾನಸಿಕ ಅಸ್ವಸ್ಥ ರಾಯ್ ಡಿಸೋಜಾ ಅವರ ಸಾವಿನ ಕುರಿತು ನಾಲ್ಕು ವಾರಗಳಲ್ಲಿ ಅಂದರೆ ನವೆಂಬರ್ 11 ರೊಳಗೆ ವರದಿ ನೀಡುವಂತೆ ಕ್ಷಮಾ ಮಿಶ್ರಾ ಅವರಿಗೆ ನ್ಯಾಯಾಧೀಶ ಅರುಣ್ ಕುಮಾರ್ ಮಿಶ್ರಾ ಅವರು ನೋಟಿಸ್‌ ನಲ್ಲಿ ಸೂಚಿಸಿದ್ದಾರೆ.

ವಿರಾಜಪೇಟೆ ನಿವಾಸಿ ರಾಯ್ ಡಿಸೋಜಾ(50) ಅವರು ವಿರಾಜಪೇಟೆ ಪಟ್ಟಣ ಪೊಲೀಸರು ನಡೆಸಿದ ಹಲ್ಲೆಯಿಂದ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಲವು ಆಂತರಿಕ ಅಂಗಗಳಿಗೆ ಗಾಯಗಳಾಗಿರುವುದು ಮತ್ತು ರಬ್ಬರ್‌ ದೊಣ್ಣೆಯಿಂದ ಹೊಡೆದ ಗುರುತುಗಳು ಪತ್ತೆಯಾಗಿದ್ದವು.

ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜಾ ಮೃತ ಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೆ ಅವರ ಸಹೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿ, ಠಾಣೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಪ್ರಾಥಮಿಕ ತನಿಖೆ ನಡೆಸಿದ ವಿರಾಜಪೇಟೆ ಡಿವೈಎಸ್ಪಿ ಜಯ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ವರದಿಯ ಆಧಾರದ ಮೇಲೆ 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

SCROLL FOR NEXT