ರಾಜ್ಯ

ಮಂಗಳೂರು: ಶುಲ್ಕ ಭರಿಸಲಾಗದೆ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ

Nagaraja AB

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಕಾಲೇಜ್ ಹಾಸ್ಟೆಲ್ ನ ಬಾತ್ ರೂಮ್ ನಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಕಾಸರಗೋಡಿನ ಕಾಡುಮೆನಿ ಗ್ರಾಮದ ನೀಲಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.  ಕೋವಿಡ್-19 ಸಾಂಕ್ರಾಮಿಕದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪೋಷಕರಿಗೆ ತನ್ನ ಶಿಕ್ಷಣದ ವೆಚ್ಚದೊಂದಿಗೆ ಮತ್ತಷ್ಟು ಹೊರೆಯಾಗಲು ಇಷ್ಟಪಡುವುದಿಲ್ಲ ಎಂದು ಆಕೆ ಡೆತ್ ನೋಟ್ ಬರೆದಿಟ್ಟಿದ್ದಾಳೆ.

ಖಾಸಗಿ ನರ್ಸಿಂಗ್ ಕಾಲೇಜ್ ವೊಂದರಲ್ಲಿ ಪ್ರಥಮ ವರ್ಷದ ಬಿಎಸ್ ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, 75 ಸಾವಿರ ರೂ. ಶುಲ್ಕವನ್ನು ಪಾವತಿಸಿದ್ದಳು. ಆದರೂ, ಆಕೆಯ ಯೂನಿಫಾರಂಗಾಗಿ ಉಳಿದ ಹಣಕ್ಕಾಗಿ ಕಾಲೇಜ್ ನಿಂದ ಆಕೆಯನ್ನು ಪೀಡಿಸಲಾಗುತಿತ್ತು ಎಂಬ ವಿಚಾರ ಆಕೆ ಬರೆದಿರುವ ಡೆತ್ ನೋಟ್ ನಿಂದ ತಿಳಿದುಬಂದಿದೆ. ಈ ಘಟನೆ ಸಂಬಂಧ ಅಸ್ವಾಭಾವಿಕ ಸಾವು ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೂರ್ವ ಪೊಲೀಸರು ತಿಳಿಸಿದ್ದಾರೆ. 

ಮಂಗಳವಾರ ಬಾತ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಕೆ ಸೋಮವಾರ ಬರೆದಿರುವ ಡೆತ್ ನೋಟ್ ನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಈ ಘಟನೆ ಬುಧವಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಸಾವಿನ ಕುರಿತು ಅನುಮಾನಗಳು ಉಂಟಾದ ಹಿನ್ನೆಲೆಯಲ್ಲಿ ನೀಲಾ ತಾಯಿ, ಸೋದರ ಮಾವ ಹಾಗೂ ಆಕೆಯ ಸಹಪಾಠಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ. ಅದಕ್ಕೆ ಪುಷ್ಠಿ ನೀಡುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು. 

SCROLL FOR NEXT