ರಾಜ್ಯ

ಬೆಂಗಳೂರಿನಲ್ಲಿ ಮೂರು ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತ: ಸ್ವಲ್ಪದರಲ್ಲೆ ನಿವಾಸಿಗಳು ಪಾರು; 2 ವಾರಗಳಲ್ಲಿ 3ನೇ ಅವಘಡ

Shilpa D

ಬೆಂಗಳೂರು: ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಗೆ ಕಟ್ಟಡ ಕುಸಿತ ದುರಂತ ಮುಂದುವರೆದಿದೆ. ವಿಲ್ಸನ್ ಗಾರ್ಡನ್ ಸಮೀಪ ಕಟ್ಟಡವೊಂದು ಕುಸಿದು ಬಿದ್ದು ಮೆಟ್ರೊ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ 40 ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಈ ಘಟನೆ ಮಾಸುವ ಮುನ್ನ ಕಸ್ತೂರಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟ ವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಮಮೂರ್ತಿನಗರ ವಾರ್ಡ್‌ನ ಕಸ್ತೂರಿನಗರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ನಾಲ್ಕಂತಸ್ತಿನ ಸನ್‌ಶೈನ್‌ ಅಪಾರ್ಟ್‌ಮೆಂಟ್‌ ಕಟ್ಟಡ ಕುಸಿದು ಬಿದ್ದಿದೆ. ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿದ್ದ ಮೂವರು ತಕ್ಷಣ ಹೊರ ಬಂದು ಬಚಾವಾಗಿದ್ದಾರೆ.

ಕಟ್ಟಡದಲ್ಲಿ 8 ಫ್ಲ್ಯಾಟ್‌ಗಳಿದ್ದು, ಮೂರರಲ್ಲಿ ಮಾತ್ರ ಜನರು ವಾಸವಿದ್ದರು. ಎಲ್ಲ ಮನೆಗಳನ್ನು ಬಾಡಿಗೆಗೆ ಕೊಡಲಾಗಿತ್ತು. ಹೆಚ್ಚಿನವರು ಕಚೇರಿ, ಕೆಲಸ ನಿಮಿತ್ತ ಹೊರ ಹೋಗಿದ್ದರು. ಗುರುವಾರ ಮಧ್ಯಾಹ್ನ ತಳಮಹಡಿಯಲ್ಲಿ ಕುಸಿತದ ಶಬ್ದ ಕೇಳಿ ಬಂದಿದೆ. ತಕ್ಷಣ ಕಟ್ಟಡದಲ್ಲಿದ್ದ ಮೂವರು ಕೆಳಗೆ ಇಳಿದು ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಜಖಂ ಆಗಿವೆ. ಕುಸಿತಗೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಲು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಅಕ್ರಮವಾಗಿ ಕಟ್ಟಡ. ನೆಲ ಮಹಡಿ ಜತೆಗೆ ಎರಡು ಕಟ್ಟಡ ನಿರ್ಮಾಣ ಮಾಡಲಿಕ್ಕೆ ಅನುಮತಿ ಪಡೆಯಲಾಗಿದೆ. ಆದರೆ, ಅಕ್ರಮವಾಗಿ ಹೆಚ್ಚುವರಿಯಾಗಿ ಎರಡು ಅಂತಸ್ತು ನಿರ್ಮಿಸಿರುವ ಕಾರಣದಿಂದ ಕಟ್ಟಡ ಕುಸಿತಗೊಂಡಿದೆ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಸಂಬಂಧ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದಾರೆ.

ಎ.ಎನ್‌. ಬಿಲ್ಡರ್ಸ್ ಎಂಬ ಸಂಸ್ಥೆ 2014ರಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿತ್ತು. ತಳಮಹಡಿ ಹಾಗೂ ಎರಡು ಮಹಡಿ (ಜಿ+2)ಗೆ ಅನುಮತಿ ಪಡೆದು ಮೂರು ಮಹಡಿ (ಜಿ+3)ಯ ಕಟ್ಟಡ ನಿರ್ಮಿಸಲಾಗಿತ್ತು. ನಿರ್ಮಿಸುವ ಹಂತದಲ್ಲೇ ಒಂದು ಮಹಡಿಯನ್ನು ಹೆಚ್ಚುವರಿಯಾಗಿ ಕಟ್ಟುವ ಮೂಲಕ ಅಕ್ರಮವೆಸಗಲಾಗಿತ್ತು. ಕಟ್ಟಡ ಪೂರ್ಣಗೊಂಡ ಬಗ್ಗೆ, ನಿವಾಸಿಗಳಿಗೆ ಹಸ್ತಾಂತರಿಸಿದ ಸಂಬಂಧ ಸಿಸಿ ಹಾಗೂ ಒಸಿಯನ್ನು ಪಡೆದಿರಲಿಲ್ಲ.

ಕಳೆದ ವರ್ಷ ಕಟ್ಟಡದ ಮೇಲೆ ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ ಆರಂಭಿಸಲಾಗಿತ್ತು. ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವುದನ್ನು ಆಕ್ಷೇಪಿಸಿ ಫ್ಲ್ಯಾಟ್‌ನ ನಿವಾಸಿಗಳು ಭೂಮಾಲೀಕ ಹಾಗೂ ಬಿಲ್ಡರ್‌ ವಿರುದ್ಧ ಪಾಲಿಕೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಕಳೆದ ವರ್ಷ ಮಾರ್ಚ್ ನಲ್ಲಿ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮೌನ ವಹಿಸಿದ್ದರು. ಕಳಪೆ ಕಾಮಗಾರಿ ಜತೆಗೆ ಹೆಚ್ಚುವರಿ ಕಟ್ಟಡ ಕಟ್ಟಿದ್ದು ಕಟ್ಟಡ ಕುಸಿಯಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

SCROLL FOR NEXT