ರಾಜ್ಯ

ತುಮಕೂರು: ಶಿಥಿಲಾವಸ್ಥೆಯಲ್ಲಿ ಸಿರಾ ಸರ್ಕಾರಿ ಪಿಯು ಕಾಲೇಜು ಕಟ್ಟಡ, ಭಯ-ಆತಂಕ ಮಧ್ಯೆ ಪಾಠ ಕೇಳುತ್ತಿರುವ ಮಕ್ಕಳು!

Sumana Upadhyaya

ತುಮಕೂರು: ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಬ್ಯುಸಿಯಲ್ಲಿ ಸರ್ಕಾರವಿದ್ದರೆ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ 24 ಕೊಠಡಿಗಳಲ್ಲಿ 8 ಕೊಠಡಿಗಳು ಮಾತ್ರ ವಿದ್ಯಾರ್ಥಿಗಳ ಬಳಕೆಯ ಸ್ಥಿತಿಯಲ್ಲಿದ್ದು ಉಳಿದ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಬಿಟ್ಟುಬಿಡಲಾಗಿದೆ. ಕಟ್ಟಡ ಯಾವಾಗ ಕುಸಿದು ಬೀಳುತ್ತದೋ ಎಂಬ ಭೀತಿಯಲ್ಲಿಯೇ ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿಯಿದೆ. 

ಕಟ್ಟಡದ ಕೆಲವು ಕಂಬಗಳು, ಕೊಠಡಿಯ ಮೇಲ್ಛಾವಣಿ ಮತ್ತು ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಆಡಳಿತ ಮಂಡಳಿ ದುರಸ್ತಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದಾರೆ.

ಈ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆಯಾಗಿದ್ದು 1949ರ ಜುಲೈ 30ರಂದು ಅಂದಿನ ಕರ್ನಾಟಕ ಗವರ್ನರ್ ಜಯಚಾಮರಾಜೇಂದ್ರ ಒಡೆಯರ್. ನಂತರ 1955ರ ಏಪ್ರಿಲ್ 27ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಉದ್ಘಾಟಿಸಿದರು. ಉದ್ಘಾಟನೆ ಸಮಯದಲ್ಲಿ ಇದನ್ನು ಸಿರಾ ಮುನ್ಸಿಪಲ್ ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು.
ಕಟ್ಟಡದ ಕೊಠಡಿಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದು ತರಗತಿಗಳನ್ನು ನಡೆಸುವ ಪರಿಸ್ಥಿತಿಯಲ್ಲಿಲ್ಲ. ದೇಶಕ್ಕೆ ಹಲವು ಖ್ಯಾತನಾಮ ಪ್ರಜೆಗಳನ್ನು ನೀಡಿದ ಈ ಶಾಲೆ 1955ರ ನಂತರ ದುರಸ್ತಿಯನ್ನೇ ಕಂಡಿಲ್ಲ ಎಂದು ಇಲ್ಲಿನ ಹಳೆ ವಿದ್ಯಾರ್ಥಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶಾಲೆಗಳನ್ನು ದೆಹಲಿ ಸರ್ಕಾರ ಮರು ನಿರ್ಮಿಸಬಹುದಾದರೆ ಕರ್ನಾಟಕಕ್ಕೆ ಏಕೆ ಸಾಧ್ಯವಿಲ್ಲ, ಶಿಕ್ಷಣಕ್ಕೆ ಬಜೆಟ್ ನಲ್ಲಿ ಹಣ ಮೀಸಲು ಇಡುತ್ತಿಲ್ಲವೇ ಎಂದು ಅವರು ಕೇಳುತ್ತಾರೆ.

ತುಮಕೂರು ಜಿಲ್ಲೆಯವರೇ ಆಗಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ತಕ್ಷಣವೇ ಶಾಲೆಯ ದುರಸ್ತಿ ಮಾಡಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ನೆರವಾಗಬೇಕು ಎಂದು ಹೇಳಿದ್ದಾರೆ.

ಸರ್ಕಾರಿ ಜ್ಯೂನಿಯರ್ ಕಾಲೇಜಿನ (ಹೈಸ್ಕೂಲ್ ವಿಭಾಗ) ಉಪ ಪ್ರಾಂಶುಪಾಲ ನಾಗರಾಜ್, ಶಾಲೆಯಲ್ಲಿ ಸುಮಾರು 490 ಮಕ್ಕಳಿದ್ದು ಅವರಲ್ಲಿ 192 ಮಂದಿ ಹೊಸದಾಗಿ ದಾಖಲಾದವರು. 24 ಕೊಠಡಿಗಳಲ್ಲಿ 16ನ್ನು ಶಿಥಿಲಾವಸ್ಥೆಯೆಂದು ಹಾಗೆಯೇ ಬಿಡಲಾಗಿದ್ದು ಕೇವಲ 8 ಕೊಠಡಿಗಳು ಮಾತ್ರ ಬೋಧನೆಗೆ ಬಳಕೆಯ ಸ್ಥಿತಿಯಲ್ಲಿವೆ. ಬಹುತೇಕ ತರಗತಿಗಳನ್ನು ಹೊರಗೆ ಮರದ ಕೆಳಗೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.

ಕಟ್ಟಡವನ್ನು ಕೆಡವಿ ಹೊಸದಾಗಿ ಹೈಸ್ಕೂಲ್ ಗೆ ಕಟ್ಟಡ ನಿರ್ಮಾಣ ಮಾಡಿ ಎಂದು ನಾವು ಶಿಕ್ಷಣ ಇಲಾಖೆಯನ್ನು ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ ನಮ್ಮ ಮನವಿಯನ್ನು ಕಳುಹಿಸಲಾಗಿದ್ದು ಅದರಲ್ಲಿ ಕಟ್ಟಡದ ಪರಿಸ್ಥಿತಿ ಮತ್ತು ಕೆಡವಲು ಶಿಫಾರಸ್ಸನ್ನು ಕಳೆದ ಜನವರಿ 18ಕ್ಕೆ ಮಧುಗಿರಿಯ ಕಾರ್ಯಕಾರಿ ಎಂಜಿನಿಯರ್ ಶಿಫಾರಸು ಮಾಡಿದ್ದಾರೆ. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಪಟ್ಟನಾಯಕನಹಳ್ಳಿ, ಬರಗೂರು, ಕಲ್ಲಂಬೆಲ್ಲ, ತಾವರೆಕೆರೆ ಮತ್ತು ಇತರ ಹೋಬಳಿಗಳ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣಕ್ಕೆ ಬರುತ್ತಿದ್ದು, ತರಗತಿಗಳನ್ನು ಈ ದುರವಸ್ಥೆಯ ಮಧ್ಯೆಯೇ ನಡೆಸಲಾಗುತ್ತಿದೆ ಎಂದು ನಾಗರಾಜ್ ಬೇಸರ ವ್ಯಕ್ತಪಡಿಸುತ್ತಾರೆ. 
ಇದೇ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ಕುಮಾರ್, ತಾವು ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡು ಅದೇ ಕಟ್ಟಡದಲ್ಲಿ ಡಿಗ್ರಿ, ಪಿಯು ಕಾಲೇಜು ಮತ್ತು ಹೈಸ್ಕೂಲ್ ನಡೆಸುತ್ತಿದ್ದುದನ್ನು ನೆನಪು ಮಾಡಿಕೊಂಡರು. ಆದರೆ ಇಂದು ಆ ಕಟ್ಟಡದಲ್ಲಿ ಕೇವಲ ಹೈಸ್ಕೂಲ್ ನಡೆಸಲಾಗುತ್ತಿದ್ದು, ಡಿಗ್ರಿ ಮತ್ತು ಪಿಯು ಕಾಲೇಜುಗಳು ಪಕ್ಕದ ಉತ್ತಮ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ನಡೆಯುತ್ತಿದೆ ಎಂದರು.

ತಾವು ಸಿರಾ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೋಡಿ ತಪಾಸಣೆ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಹೇಳಿದ್ದಾರೆ. ಈಗಿರುವ ಹೈಸ್ಕೂಲ್ ವಿಭಾಗ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಎಂದು ಒಪ್ಪಿಕೊಂಡಿರುವ ಅವರು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

SCROLL FOR NEXT