ರಾಜ್ಯ

ಮಂಗಳೂರು: ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರ ವಿರುದ್ಧ ಅತ್ಯಾಚಾರ ಆರೋಪ

Manjula VN

ಮಂಗಳೂರು: ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್ ರಾಜೇಶ್ ಅವರ ವಿರುದ್ಧ ಕಾನೂನು ವಿದ್ಯಾರ್ಥಿನಿಯೊಬ್ಬರು ಅತ್ಯಾಚಾರ ಯತ್ನ ಪ್ರಕರಣವೊಂದನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ. 

ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ದೂರಿನಲ್ಲಿ, ಕಳೆದ ಆ.8 ರಂದು ಕೆ.ಎಸ್.ಎನ್ ರಾಜೇಶ್ ಅವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರ್ಪಡೆಗೊಳ್ಳಲಾಗಿತ್ತು. ಬಳಿಕ ರಾಜೇಶ್ ಅವರು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯ ಮಾಡುತ್ತಿದ್ದರು. ಸೆ.25 ರಂದು ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದುಬಂದಿದೆ. 

ಎರಡು ದಿನಗಳ ಹಿಂದೆ ರಾಜೇಶ್ ಮತ್ತು ವಿದ್ಯಾರ್ಥಿನಿ ಮಾತನಾಡಿದ್ದು ಎನ್ನಲಾದ ಫೋನ್ ಕರೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಡಿಯೋ ವೈರಲ್ ಆಗಿದೆ. 

ಆಡಿಯೋದಲ್ಲಿ ರಾಜೇಶ್ ಅವರು ಯುವತಿಯನ್ನು ಮತ್ತೆ ಕಚೇರಿಗೆ ಬರುವಂತೆ ತಿಳಿಸಿದ್ದು, ಮತ್ತೆಂದೂ ದುರ್ವರ್ತನೆ ತೋರುವುದಿಲ್ಲ ಎಂದು ಮನವಿ ಮಾಡಿಕೊಂಡಿರುವುದು ಕಂಡು ಬಂದಿದೆ. 

ಈ ನಡುವೆ ಮಂಗಳೂರು ಪೊಲೀಸ್ ಆಟುಕ್ತ ಎನ್.ಶಶಿಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಅತ್ಯಾಚಾರ ಯತ್ನ ಹಾಗೂ ವಿಚಾರ ಬಹಿರಂಗ ಪಡಿಸದಂತೆ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿರುವುದು ಸೇರಿ ಎರಡು ಪ್ರಕರಣಗಳು ದಾಖಲಾಗಿವೆ. ಎಸಿಪಿ ರಂಜಿತ್ ಬಂಡಾರು ತನಿಖಾಧಿಕಾರಿಯಾಗಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT