ರಾಜ್ಯ

ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ

Manjula VN

ಬೆಂಗಳೂರು: ಕೊರೋನಾ ನಿಯಂತ್ರಣ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ನಿಗಾ ವಹಿಸಲು ಪ್ರತಿ ಕಚೇರಿಯಲ್ಲೂ ಪ್ರತ್ಯೇಕ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಪರಿಸ್ಥಿತಿಯನ್ನು ಇದೇ ರೀತಿಯಲ್ಲಿ ನಿಯಂತ್ರಣದಲ್ಲಿಟ್ಟುಕೊಳ್ಳಲು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂದರ್ಶಕರು ಕೋವಿಡ್‌ ನಿಯಂತ್ರಣಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿಗಳಲ್ಲೂ ಕೊರೋನಾ ನಿಯಮ ಪಾಲನೆ ಅಗುತ್ತಿರುವ ಬಗ್ಗೆ ನಿಗಾ ವಹಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುವುದು. ಯಾರಾದರೂ ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಆದೇಶದಲ್ಲಿ ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ನೋಡಲ್‌ ಅಧಿಕಾರಿ ಸೂಚನೆ ನೀಡಬೇಕು. ಸೂಚನೆ ಹೊರತಾಗಿಯೂ ಉಲ್ಲಂಘನೆ ಪುನರಾವರ್ತನೆಯಾದರೆ ದಂಡ ಅಥವಾ ಸೂಕ್ತ ಕ್ರಮ ವಹಿಸಲು ಆದೇಶದಲ್ಲಿ ಸೂಚಿಸಲಾಗಿದೆ.

SCROLL FOR NEXT