ರಾಜ್ಯ

ಆಡಳಿತಗಾರನಿಗೆ ಜನರ ನಾಡಿಮಿಡಿತ ತಿಳಿದಿರಬೇಕು, ಕರಾವಳಿ ಜಿಲ್ಲೆಗಳಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ: ಸಿಎಂ ಬೊಮ್ಮಾಯಿ

Sumana Upadhyaya

ಹಾವೇರಿ: ಒಬ್ಬ ಆಡಳಿತಗಾರನಿಗೆ ನಾಡಿನ ಜನರ ನಾಡಿಮಿಡಿತ ಗೊತ್ತಿರಬೇಕು. ದುಡಿಮೆ ಇದ್ದ ನಾಡು ಶ್ರೀಮಂತ ಆಗಿರಬೇಕು. ನಾಡಿನ ಜನತೆ ಶ್ರೀಮಂತರಾದರೆ ನಮ್ಮ ಸರಕಾರಗಳು ಶ್ರೀಮಂತ ಆಗುತ್ತವೆ. ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನಷ್ಟು ಕಲ್ಪನೆಗಳನ್ನ ಇಟ್ಟುಕೊಂಡಿದ್ದೆ. ಅವೆಲ್ಲವನ್ನೂ ಬರುವ‌ ದಿನಗಳಲ್ಲಿ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಅವರು ಇಂದು ತಮ್ಮ ತವರು ಜಿಲ್ಲೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿ, ರೈತರ ಆದಾಯ ಎರಡು ಪಟ್ಟು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇನೆ. ಭೂಮಿಯ ಪ್ರಮಾಣ ಕಡಿಮೆ ಆಗುತ್ತಿದೆ. ರೈತರ‌‌ ಮಕ್ಕಳು ಬೇರೆಯವರಂತೆ ಮುಂದೆ ಬರಬೇಕು. ನಾನು ಸಿಎಂ ಆಗುತ್ತಿದ್ದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡಬೇಕು ಅಂತಾ ನಿರ್ಧಾರ ಮಾಡಿದೆ. ದೇಶದಲ್ಲಿ ಇಂತಹ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕದಲ್ಲಿ ಮಾತ್ರ. ರೈತರಿಗೆ ಮಾತ್ರವಲ್ಲದೆ ಬೇರೆ ಬೇರೆ ರೀತಿಯ ತರಬೇತಿ ಕೊಟ್ಟು ಅವರ ಅಭಿವೃದ್ಧಿ ಆಗುವಂತೆ ಮಾಡುತ್ತೇನೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್​ಸಿಸಿ ಮನೆಗಳು ನೌಕರಿ ಮಾಡುವವರದ್ದು ಮಾತ್ರ ಆಗಿದೆ. ಹೀಗಾಗಿ ರೈತರ ಮಕ್ಕಳಿಗಾಗಿ ಯೋಜನೆ ರೂಪಿಸಿದ್ದೇನೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಹೆಚ್ಚಳ ಮಾಡಿದ್ದೇನೆ ಎಂದರು. 

ಉಗ್ರರ ಮೇಲೆ ನಿಗಾ: ದೇಶ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ. ಈಗಾಗಲೇ ಎನ್‌ಐಎ ಕೆಲವರ ಹೆಸರು ಪಟ್ಟಿ ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ರಾಜ್ಯದ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಜತೆಗೆ ರಾಷ್ಟ್ರೀಯ ತನಿಖೆ ಏಜೆನ್ಸಿಯೊಂದಿಗೂ ನಿಕಟ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ನಾಯಕರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಕೇಂದ್ರ ನಾಯಕರ ಜತೆ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಇದಕ್ಕೂ ಮುನ್ನ ಸಿಎಂ ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಹೇಳಿದರು.

ನಾಳೆ ದಾವಣಗೆರೆಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ: ಕೇಂದ್ರ ಸಚಿವ ಅಮಿತ್ ಶಾ ನಾಳೆ ದಾವಣಗೆರೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ 5 ಕಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಜಿಎಂಐಟಿ ಹೆಲಿಪ್ಯಾಡ್‌ಗೆ ಆಗಮಿಸಿ ನಂತರ ಅಪರಾಹ್ನ ಗಾಂಧಿ ಭವನ ಉದ್ಘಾಟನೆ ಮಾಡಲಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿರುವ ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಗೌರವಾರ್ಪಣೆ ಮಾಡಲಿದ್ದಾರೆ. ಸಾಯಂಕಾಲ ಜಿಎಂಐಟಿ ಕಾಲೇಜು ಅವರಣದಲ್ಲಿ ನಿರ್ಮಾಣವಾದ ಜಿಎಂಐಟಿ ಕೇಂದ್ರ‌‌ ಗ್ರಂಥಾಲಯವನ್ನು ಉದ್ಘಾಟಿಸಿ, ಸಾಯಂಕಾಲ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುತ್ತಾರೆ ಎಂದರು.

ಅಭಿವದ್ಧಿ ಕಾರ್ಯಗಳಿಗೆ ಬಿಜೆಪಿ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT