ರಾಜ್ಯ

ತಾವೇ ಮಾಡಿದ್ದ ಹಾರ-ತುರಾಯಿ ನಿಷೇಧ ನಿಯಮ ಉಲ್ಲಂಘಿಸಿದ ಸಿಎಂ ಬೊಮ್ಮಾಯಿ..?

Srinivasamurthy VN

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ನಿಷೇಧ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮತ್ತು ಹೂ ಬೆಳೆಗಾರರ ವಿರೋಧಕ್ಕೆ ಪಾತ್ರರಾಗಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಾವೇ ಮಾಡಿದ್ದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು.. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿದ ಆದೇಶವನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಲಂಘಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಭಾನುವಾರ ನಡೆದ 'ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ' ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಇದೇ ರೀತಿ ಸನ್ಮಾನಿಸಲಾಯಿತು.

ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ತೋಟಗಾರಿಕೆ ಸಚಿವ ಮುನಿರತ್ನ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್  ಅವರು ಎಲ್ಲರನ್ನೂ ಸನ್ಮಾನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಮುನಿಸ್ವಾಮಿ, ಡಾ.ಉಮೇಶ್ ಜಾಧವ್, ಈರಣ್ಣ ಕಡಾಡಿ ವೇದಿಕೆಯಲ್ಲಿದ್ದರು.

ಈ ಹಿಂದೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದರು.
 

SCROLL FOR NEXT