ರಾಜ್ಯ

ಬೆಂಗಳೂರಿನಿಂದ ಅನತಿ ದೂರದಲ್ಲಿದ್ದರೂ ಕಾಂಕ್ರೀಟ್ ರಸ್ತೆ ಕಾಣದ ಚೂಡಹಳ್ಳಿ ಗ್ರಾಮ!

Nagaraja AB

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಅನೇಕಲ್ ತಾಲೂಕಿನ ಚೂಡಹಳ್ಳಿ ಗ್ರಾಮದ ನಿವಾಸಿಗಳು ಸರಿಯಾದ ರಸ್ತೆಯಿಲ್ಲದೆ, ಬಸ್ ಸೌಕರ್ಯವಿಲ್ಲದೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರಿನಿಂದ ಕೇವಲ 40 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 18-20 ವರ್ಷಗಳಿಂದ ರಸ್ತೆ ಡಾಂಬರೀಕರಣವಾಗಿಲ್ಲ, ಇದರಿಂದ ಬಸ್ ಸಂಚಾರವಿಲ್ಲದೆ, ಕೆಲಸಕ್ಕಾಗಿ ಪ್ರತಿನಿತ್ಯ ನಗರಕ್ಕೆ ಬರುವ ಜನರು ಹೆಣಗಾಡುವಂತಾಗಿದೆ. ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಬಹಳ ತೊಂದರೆಯಾಗಿದೆ.

ಗುಂಡಿಗಳಿಂದ ತುಂಬಿರುವ ರಸ್ತೆ

ಅದರಲ್ಲೂ, ದ್ವಿಚಕ್ರ ವಾಹನ ಸವಾರರು, ಸರಕು- ಸಾಗಣೆ ಪೂರೈಕೆದಾರರು, ವ್ಯಾಪಾರಿಗಳ ಗೋಳು ಕೇಳುವಂತಿಲ್ಲ, ಗುಂಡಿ ಬಿದ್ದ ಮಣ್ಣಿನ ರಸ್ತೆಯಲ್ಲಿ ನಿತ್ಯ ಪ್ರಯಾಣಿಸಬೇಕಾದ್ದರಿಂದ ಅನೇಕ ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಪಘಾತಗಳು ಆಗ್ಗಿಂದಾಗೆ ಆಗುತ್ತಲೇ ಇರುತ್ತವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಈ ವಲಯದಲ್ಲಿ ಆನೆ, ಕರಡಿ ಮತ್ತಿತರ ವನ್ಯಜೀವಿಗಳ ಹಾವಳಿ ಕೂಡಾ ಹೆಚ್ಚಾಗಿದ್ದು, ಹಾಡುಹಾಗಲಲ್ಲೇ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಮೂಡಿಸಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಂಡ್ಲವಾಡಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. 

ಹಾಲಿ ಕೇಂದ್ರ ಸಚಿವರಾಗಿರುವ ಎ. ನಾರಾಯಣಸ್ವಾಮಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಗೆದಿದ್ದರು. ಶಿವಣ್ಣ ಹಾಲಿ ಶಾಸಕರಾಗಿದ್ದು, ಡಿ. ಕೆ. ಸುರೇಶ್ ಸಂಸದರಾಗಿದ್ದಾರೆ. ಆದರೆ, ಈ ನಾಯಕರಿಗೆ ಚೂಡಹಳ್ಳಿ ಗ್ರಾಮದ ಜನರ ಸಮಸ್ಯೆ ಮಾತ್ರ ಇವರೆಗೆ ಕಣ್ಣಿಗೆ  ಬಿದ್ದಿಲ್ಲ. ಕೂಡಲೇ ರಸ್ತೆಗೆ ಡಾಂಬರೀಕರಣ ಹಾಕುವ ನಿಟ್ಟಿನಲ್ಲಿ ನಾಯಕರು ಹಾಗೂ ಸರ್ಕಾರ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT