ವಿಧಾನ ಪರಿಷತ್ 
ರಾಜ್ಯ

ಕಾಂಗ್ರೆಸ್, ಜೆಡಿಸ್ ಸಭಾತ್ಯಾಗದ ನಡುವೆ ಮೇಲ್ಮನೆಯಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗದ ನಡುವೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ...

ಬೆಂಗಳೂರು: ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗದ ನಡುವೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕರಿಸಲಾಯಿತು.

ವಿಧಾನಸಭೆಯಿಂದ‌ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಸಚಿವ ಕೆ.ಎಸ್‌ ಈಶ್ವರಪ್ಪ ಮಂಡಿಸಿದರು.

ವಿಧೇಯದಕ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿದರು.

ವಿಧೇಯಕದ‌ ಮೇಲೆ ಮಾತನಾಡಿದ ಅವರು, ವಿಧೇಯಕಕ್ಕೆ ನಮ್ಮ ವಿರೋಧವಿದೆ, ಚುನಾವಣಾ ಆಯೋಗಕ್ಕೆ ನೀಡಿದ ಅಧಿಕಾರ ವಾಪಸ್ ಪಡೆದರೆ ಹೇಗೆ? ಇದರಿಂದ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮನಸ್ಸೋ ಇಚ್ಚೆ ಆಗಲಿದೆ. ಸಂವಿಧಾನದಲ್ಲಿ ಪಾರದರ್ಶಕ ಕೆಲಸಕ್ಕೆ ಚುನಾವಣಾ ಆಯೋಗಗಳನ್ನು ರಚಿಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಅಧಿಕಾರ ವಾಪಸ್ ಪಡೆಯುತ್ತಿರುವುದು ಸರಿಯಲ್ಲ ಎಂದರು.

ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗ, ನ್ಯಾಯಾಲಯ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳು, ಇಂತಹ ಸಂಸ್ಥೆಗಳ ಅಧಿಕಾರ ವಾಪಸ್ ಪಡೆಯುವುದು ಸರಿಯಲ್ಲ. ರಾಜ್ಯ ಚುನಾವಣಾ ಆಯೋಗದ ಮೇಲೆ ನಮಗೆ ನಂಬಿಕೆ ಇದೆ. ಅವರು ಕ್ಷೇತ್ರ ವಿಂಗಡಣೆ ಮಾಡುತ್ತಿದ್ದು, ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಕೆಲಸ ಮಾಡುತ್ತಿದ್ದಾರೆ, ಅದನ್ನು ನಿಮ್ಮ ಅಧೀನದ ಸಮಿತಿಗೆ ಕೊಟ್ಟರೆ ನೀವು ಹೇಳಿದಂತೆ ಸಮಿತಿ ಮಾಡಿಕೊಡಲಿದೆ. ಅಲ್ಲಿಗೆ ಅಧಿಕಾರವನ್ನು ಸರ್ಕಾರವೇ ನೇರವಾಗಿ ಪಡೆದಂತಾಗಲಿದೆ. ಹಾಗಾದರೆ ಚುನಾವಣಾ ಆಯೋಗವನ್ನೇ ತೆಗೆದುಬಿಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳ ದುರ್ಬಳಕೆ ಈಗ ಆಗುತ್ತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಕಾಲು, ಕೈ, ಕುತ್ತಿಗೆ ತೆಗೆಯುವ ಕೆಲಸ ಮಾಡುತ್ತಿದ್ದೀರಿ, ಇದರ ಅಗತ್ಯವೇನು? ಮೀಸಲಾತಿ, ಮರುವಿಂಗಡಣೆ ಅವರು ಮಾಡಲಿ ಬಿಡಿ, ನೀವು ತಿದ್ದುಪಡಿ ಮೂಲಕ ಚುನಾವಣಾ ಆಯೋಗಕ್ಕೆ ಅಗೌರವ ತೋರುತ್ತಿದ್ದೀರಿ, ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ, ನಾನಿಲ್ಲಿ ಬಂದಿರುವುದಕ್ಕೆ ಸಂವಿಧಾನದ ನಿಯಮವೇ ಕಾರಣ. ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದರೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಾಗಲಿದೆ. ಹಾಗಾಗಿ ಈ ಬಿಲ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಆಡಳಿತ ನಡೆಸುವವರು ಶಾಶ್ವತ ಅಲ್ಲ, ಸಾಂವಿಧಾನಿಕ ಸಂಸ್ಥೆಗಳು ಶಾಶ್ವತ, ಹಾಗಾಗಿ ಇವನ್ನು ಉಳಿಸಬೇಕಿದೆ.‌ ನಾನು ಮಾಧುಸ್ವಾಮಿಯಲ್ಲಿ ನಜೀರ್ ಸಾಬ್ ರನ್ನು ಕಾಣುತ್ತಿದ್ದೇನೆ, ನಿಮ್ಮ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳ ಬಲಪಡಿಸದೇ ಇದ್ದಲ್ಲಿ ಯಾರಿಂದ ನಂಬಲಿ, ಮಾಧುಸ್ವಾಮಿ, ಸಿಎಂ ಬೊಮ್ಮಾಯಿ ಸಮಾಜವಾದಿ ಹಿನ್ನಲೆಯವರು, ನಾವು ನಿಮ್ಮಿಂದ ಒಳ್ಳೆಯದನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ನನ್ನಲ್ಲಿ ನಜೀರ್ ಸಾಬ್ ರನ್ನು ನೋಡುತ್ತಿದ್ದೀರಿ, ಅಂದು ನಜೀರ್ ಸಾಬ್ ಅವರಿಗೂ ಇದೇ ಸ್ಥಿತಿ ಇತ್ತು, ಹೆಗಡೆ ಕಾಲದಲ್ಲಿ ನಜೀರ್ ಸಾಬ್ ಇದೇ ಸ್ಥಿತಿಯಲ್ಲಿದ್ದರು. ಡಿಮಿಟೇಷನ್ ಗೂ ಎಲೆಕ್ಷನ್ ಕಮೀಷನ್ ಗೂ ಸಂಬಂಧ ಇಲ್ಲ, ಯಾರಾದರೂ ಒಬ್ಬರು ದೂರು ಕೊಟ್ಟರೆ ಪರಿಶೀಲಿಸಬೇಕು, ಉತ್ತರ ಹೇಳಬೇಕಲ್ಲವೇ? ತಕರಾರು ಬಂದಾಗ ನ್ಯಾಯ ಒದಗಿಸಿಕೊಡಬೇಕಲ್ಲವೇ? ಒಬ್ಬ ಸಮಿತಿ ಬದಲು ಹಲವು ಸದಸ್ಯರನ್ನು ಒಳಗೊಂಡ ಅಡಾಕ್ ಸಮಿತಿ ರಚಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಈ ಬಾರಿ ಕ್ಷೇತ್ರ ಮರುವಿಂಗಡಣೆ ನಿರೀಕ್ಷೆ ಇರಲಿಲ್ಲ, ಹೊಸ ಜನ ಗಣತಿ ನಂತರ ಮಾಡಬೇಕು. 2022ಕ್ಕೆ ನಿರೀಕ್ಷೆ ಮಾಡಿದ್ದೆವು. ಆದರೆ ಈಗಲೇ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಮರು ವಿಂಗಡಣೆ ಮಾಡಲಾಗಿದೆ. ಇದರಿಂದ ತಕರಾರು ಅರ್ಜಿ ಹೆಚ್ಚಾಗುತ್ತಿವೆ, ಹೀಗಾದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೆಗಡೆ, ನಜೀರ್ ಸಾಬ್, ದೇವೇಗೌಡರ ಕಾಲದಲ್ಲಿ ಏನಿತ್ತೋ ಅದನ್ನೇ ನಾವು ಈಗ ಬಿಲ್ ನಲ್ಲಿ ಇಟ್ಟಿದ್ದೇವೆ, ಬೇರೆ ಏನಿಲ್ಲ, ಚುನಾವಣೆ ಆಯೋಗವೇ ಚುನಾವಣೆ ಮಾಡಲಿದೆ, ಚುನಾವಣಾ ಆಯೋಗ ಮೀಸಲಾತಿ ಮಾಡಲು ಸಾಧ್ಯವಿಲ್ಲ, ಅದನ್ನು ಸರ್ಕಾರವೇ ಕೊಡುವುದು. ಹಳೆ ಜಿಲ್ಲಾ ಪರಿಷತ್ ಆಕ್ಟ್ ಇದ್ದಲ್ಲಿಗೆ ಹೋಗಲಿದೆ‌ ಎಂದು ಬಿಲ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸದಸ್ಯ ವೆಂಕಟೇಶ್ ಮಾತನಾಡಿ, ಕೋರ್ಟ್ ಗೆ ಹೋಗುವ ಒಂದು ದಿನ ಮೊದಲು ಬರುತ್ತೀರಾ? ಹಿಂದೆ ಬಿಬಿಎಂಪಿ ಕಾಯ್ದೆಯ ವಿಚಾರದಲ್ಲಿಯೂ ಹಾಗೆಯೇ ಮಾಡಿದಿರಿ. ಆದರೆ ಇನ್ನೂ ಚುಮಾವಣೆ ಮಾಡಿಲ್ಲ, ಈಗ ಈ ಕಾಯ್ದೆ ತರುತ್ತಿದ್ದೀರಿ. ಇದೂ ಕೂಡ ಚುನಾವಣೆ ಮುಂದೂಡುವ ತಂತ್ರ ಎಂದು ಟೀಕಿಸಿದರು.

ಕಾಂಗ್ರೆಸ್ ಸದಸ್ಯ ಆರ್.ಬಿ ತಿಮ್ಮಾಪೂರ್ ಮಾತ‌ನಾಡಿ, ಈಗಿನ ಸರ್ಕಾರ ಬಂದಿದ್ದು ಹೇಗೆ ಅಂತ ಗೊತ್ತು ಎಂದು ಆಪರೇಷನ್ ಕಮಲದ ಕುರಿತು ಪರೋಕ್ಷ ಪ್ರಸ್ತಾಪ ಮಾಡಿದರು. ನಿಮ್ಮಲ್ಲಿ ಪೈಲ್ವಾನರು ಇರಲಿಲ್ಲ ಹಾಗಾಗಿ ನಮ್ಮಲ್ಲಿನ ಒಳ್ಳೆಯ ಪೈಲ್ವಾನರನ್ನು ಕರೆದುಕೊಂಡು ಹೋಗಿ ಗೆದ್ದಿರಿ. ಇದನ್ನೇ ಇಲ್ಲಿ ತರಲು ಹೊರಟಿದ್ದೀರಾ? ನೀವು ಹೇಳಿದಂತೆ ಕೇಳಬೇಕು. ಮೀಸಲಾತಿ ನಿಮಗೆ ಬೇಕಾದ ರೀತಿ ಮಾಡುತ್ತೀದ್ದೀರಿ, ಚುನಾವಣಾ ಗಿಮಿಕ್ ಗಾಗಿ ತರುತ್ತಿರುವ ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಚುನಾವಣೆ ಗೆಲ್ಲಲು ನೀವು ಇಂತಹ ಕೆಲಸ ಮಾಡುತ್ತಿದ್ದೀರಿ, ಚುನಾವಣೆ ಮುಂದೂಡಲು ಮುಂದಾಗಿದ್ದೀರಿ ಎಂದರು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಒಂದೂಕಾಲು ವರ್ಷಕ್ಕೆ ಮೈತ್ರಿ ಸರ್ಕಾರದ ಕಾಲೆಳೆದಿದ್ದೀರಿ ಎಂದು ಟಾಂಗ್ ನೀಡಿದರು. ಸರ್ಕಾರದ ನಿಲುವನ್ನು ಖಂಡಿಸಿದ ಜೆಡಿಎಸ್ ಸದಸ್ಯರು ಬಿಲ್ ವಿರೋಧಿಸಿ ಸಭಾತ್ಯಾಗ ಮಾಡಿದರು.

ಸುದೀರ್ಘ ಚರ್ಚೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಲು ಈ ಕಾಯ್ದೆ ತರಲಾಗಿದೆ. ಹಾಗಾಗಿ ಬಿಲ್ ಪಾಸ್ ಮಾಡಿಕೊಡಿ ಎಂದು ಸದನಕ್ಕೆ ಮನವಿ ಮಾಡಿದರು.

ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ವಾಪಸ್ ಪಡೆಯುವ ನಿರೀಕ್ಷೆ ಇತ್ತು, ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಇವರಿಗೆ ನಂಬಿಕೆ ಇಲ್ಲ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡುವ ಹುನ್ನಾರದಿಂದ ಈ ಬಿಲ್ ತರಲಾಗಿದೆ, ಸಂವಿಧಾನ ವಿರೋಧಿ ಬಿಲ್ ಇದಾಗಿದೆ. ಹಾಗಾಗಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಸದನದಿಂದ ಹೊರನಡೆದರು.

ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.

ವಿಧೇಯಕ ಅಂಗೀಕಾರದ ಬಳಿಕ ಸದನವನ್ನು ಸೋಮವಾರ ಬೆಳಗ್ಗೆ 11 ಗಂಟೆವರೆಗೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಮುಂದೂಡಿಕೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT