ರಾಜ್ಯ

ಕೃಷ್ಣ ಮೇಲ್ದಂಡೆ ಯೋಜನೆ: ಭೂಸ್ವಾಧೀನ ಪರಿಹಾರ ಪಾವತಿಗೆ 2500 ಕೋಟಿ ರೂ. ಬಿಡುಗಡೆಗೆ ಕ್ರಮ: ಸಿಎಂ ಬೊಮ್ಮಾಯಿ 

Srinivas Rao BV

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ  ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೊನೆಯ ಹಂತದಲ್ಲಿರುವ ಪ್ರಕರಣಗಳಿಗೆ ಕೂಡಲೇ ಪರಿಹಾರ ಪಾವತಿಸಲು, ಪುನರ್ ವಸತಿ ಕೇಂದ್ರಗಳ ಸ್ಥಾಪನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 2500 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಹಿನ್ನೀರಿನಿಂದ ಮುಳುಗಡೆಯಾಗುವ 20 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ, ಪುನರ್ ವಸತಿ ಕೇಂದ್ರಗಳ ಸ್ಥಾಪನೆಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. 

ಕೃಷ್ಣ ಭಾಗ್ಯ ಜಲ ನಿಗಮ  ಕಚೇರಿಯನ್ನು ಆಲಮಟ್ಟಿಗೆ ವರ್ಗಾಯಿಸಲು ಅವರು ಸೂಚನೆ ನೀಡಿದರು. ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಲು ಹೆಚ್ಚುವರಿ ಸಿಬ್ಬಂದಿ ಒದಗಿಸಲು ಮತ್ತು ಹೆಚ್ಚಿನ ಸಂಖ್ಯೆಯ ಸರ್ವೇಯರುಗಳನ್ನು ಬಳಸಿ ಸರ್ವೇ ಮಾಡಲು ಸೂಚಿಸಲಾಯಿತು ಎಂದು ಅವರು ತಿಳಿಸಿದರು.‌

ಕೃಷ್ಣಾ ಮೇಲ್ದಂಡೆ ಹಂತ 1 ಮತ್ತು 2ರಡಿ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದ್ದರೂ, ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ರೈತರ ಜಮೀನುಗಳಿಗೆ ನೀರು ಹರಿಯಬೇಕು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

SCROLL FOR NEXT