ರಾಜ್ಯ

ಮೈಸೂರು: ಪೊಲೀಸ್ ಪೇದೆ ನೌಕರಿಗೆ ಸೇರುತ್ತಿದ್ದಾರೆ ಅತಿ ಹೆಚ್ಚು ವಿದ್ಯಾವಂತ ಮಹಿಳೆಯರು!

Shilpa D

ಮೈಸೂರು: ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಅಭಿಲಾಷೆಯೋ ಅಥವಾ ಅನಿವಾರ್ಯವೋ ಗೊತ್ತಿಲ್ಲ, ಅತಿ ಹೆಚ್ಚು ವಿದ್ಯಾರ್ಹತೆ ಪಡೆದ ಮಹಿಳೆಯರು ಪೊಲೀಸ್ ಪೇದೆ ನೌಕರಿಗೆ ಸೇರುತ್ತಿದ್ದಾರೆ.

ಪೊಲೀಸ್ ಟ್ರೈನಿಂಗ್ ಶಾಲೆಯ ಆರನೇ ಬ್ಯಾಚ್ ನಲ್ಲಿ 242 ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದು ಮಂಗಳವಾರ ನಡೆದ ಪರೇಡ್ ಸಮಾರಂಭದಲ್ಲಿ ಭಾಗಿಯಾಗಿದ್ದರು, ಈ ಬ್ಯಾಚ್ ನಲ್ಲಿ 38 ಸ್ನಾತಕೋತ್ತರ ಪದವೀಧರರು ಮತ್ತು 182 ಪದವೀಧರರಿದ್ದಾರೆ.

ಪೇದೆ ಕೆಲಸಕ್ಕೆ ಸೇರಲು ಕನಿಷ್ಠ ವಿದ್ಯಾರ್ಹತೆ ಪಿಯುಸಿ, ಆದರೆ ಹೆಚ್ಚಿನ ಅಭ್ಯರ್ಥಿಗಳು ಪದವೀಧರರಾಗಿದ್ದು, 8 ತಿಂಗಳ ತರಬೇತಿ ಮುಗಿಸಿದ್ದಾರೆ, 13 ಪೊಲೀಸ್ ಪೇದೆಗಳು ಎಂಎ ಪದವಿ ಪಡೆದಿದ್ದರೇ ಎಂಎಸ್ ಸಿ ಮತ್ತು ಎಂಕಾಂ ಪದವೀದರರು ಸೇರಿದ್ದಾರೆ.

14 ಮಂದಿ ಎಂಜಿನೀಯರಿಂಗ್ ಮುಗಿಸಿದ್ದಾರೆ, ಆರು ಮಂದಿ ಬಿಬಿಎ ಮತ್ತು ಬಿಸಿಎ ಗ್ರಾಜ್ಯುಯೇಟ್ಸ್ ಗಳಾಗಿದ್ದಾರೆ. ನೇಮಕಾತಿಯಲ್ಲಿ 214 ಮಂದಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಾಗಿದ್ದರೇ 28 ಮಂದಿ ನಗರ ಪ್ರದೇಶದವರಾಗಿದ್ದಾರೆ. ಅವರನ್ನು ಚಾಮರಾಜನಗರ, ಮೈಸೂರು, ತುಮಕೂರು, ಕೊಡಗು,  ರಾಯಚೂರು, ಮಂಗಳೂರು ಹಾಗೂ ಕಲಬುರಗಿ ಮತ್ತಿತರ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ.

ತರಬೇತಿ ಮುಗಿಸಿ ನೇಮಕಗೊಂಡಿರುವ ಎಂ ಲತಾ ಎಂಬುವರು ಆಲ್ ರೌಂಡ್ ಬೆಸ್ಟ್ ಟ್ರೀನೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್ ಆಗಿರುವ ಲತಾ ಅವರು ಬಿಎ ಪೂರ್ಣಗೊಳಿಸಿ ಪೊಲೀಸ್ ಪೇದೆ ಪರೀಕ್ಷೆಗೆ ಹಾಜರಾಗಿದ್ದರು.

ಪೊಲೀಸ್ ಪೇದೆ ತರಬೇತಿಯ ಸಮಯದಲ್ಲಿ ಗುಂಡಿನ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸುಜಾತ ಎಸ್ ಬಿರಾದಾರ್, ಚಂದ್ರಕಲಾ ಬಿರಾದಾರ ಮತ್ತು ಚಿತ್ರಾ ಇವರು ತಮ್ಮ ತಮ್ಮ ಹಳ್ಳಿಯ ಮೊದಲ ಪೊಲೀಸ್ ಮಹಿಳೆಯರಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಅರ್ಹ ಮಹಿಳೆಯರು ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದರು. ಹೆಚ್ಚಿನ ವಿದ್ಯಾವಂತರು ಪೊಲೀಸ್ ಇಲಾಖೆಗೆ ಸೇರುತ್ತಾರೆ, ಆದರೆ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ತಮ್ಮ ಹುದ್ದೆ ತ್ಯಜಿಸುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT