ರಾಜ್ಯ

ಶಿಥಿಲಗೊಂಡ ಕಟ್ಟಡಗಳ ಕುರಿತು 30 ದಿನಗಳಲ್ಲಿ ವರದಿ ನೀಡಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ

Manjula VN

ಬೆಂಗಳೂರು: ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಇರುವ ಶಿಥಿಲ ಕಟ್ಟಡಗಳ ಕುರಿತು ವಿಶೇಷ ಸಮೀಕ್ಷೆ ನಡೆಸಿ 30 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೂಚನೆ ನೀಡಿದ್ದಾರೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಥಿಲ ಕಟ್ಟಡಗಳ ಸಮೀಕ್ಷೆ ಕುರಿತು ವಲಯ ಆಯುಕ್ತರು, ಜಂಟಿ ಆಯುಕ್ತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಜೊತೆಗೆ 2019ರಲ್ಲಿ ನಡೆಸಲಾಗಿರುವ ಸರ್ವೇ ವರದಿಯನ್ನು ಎರಡು ದಿನದ ಒಳಗೆ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. 

ಈ ಹಿಂದೆ ಗುರುತಿಸಿದ್ದ ಶಿಥಿಲ ಕಟ್ಟಡಗಳನ್ನು ಖಾಲಿ ಮಾಡಿಸಿ ನೆಲಸಮ ಮಾಡುವ ಇಲ್ಲವೇ, ದುರಸ್ತಿ ಮಾಡಿಸುವ ಕೆಲಸ ಹಿಂದೆಯೇ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಅದರ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಹೊಸದಾಗಿ ಅವಶ್ಯಕತೆ ಇರುವ ಕಡೆಗಳಲ್ಲಿ ಸಮೀಕ್ಷೆ ಮಾಡಲಾಗಿಸಲಾಗುವುದು. ಜೊತೆಗೆ ವಾಸಕ್ಕೆ ಯೋಗ್ಯವಾಗಿಲ್ಲದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತೇವೆಂದು ತಿಳಿಸಿದ್ದಾರೆ. 

2019ರಲ್ಲಿ ನಡೆಸಿರುವ ಸಮೀಕ್ಷೆ ಸರಿಯಾಗಿದ್ದರೆ, ಅದನ್ನೇ ಅನುಸರಿಸುತ್ತೇವೆ. ಇಲ್ಲದಿದ್ದರೆ ಹೊಸದಾಗಿ ಸಮೀಕ್ಷೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ. ಸಮೀಕ್ಷೆಗೆ ವಲಯಗಳ ಆಯುಕ್ತರು, ಜಂಟಿ ಆಯುಕ್ತರ ನೇತೃತ್ವದಲ್ಲಿ ವಿವಿಧ ವಿಭಾಗಗಳ ಅಧಿಕಾರಿಗಳ ತಂಡ ರಚಿಸಲಾಗುವುದು, ಇನ್ನೆರಡು ದಿನಗಳಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತೇವೆಂದು ಹೇಳಿದರು.

SCROLL FOR NEXT