ರಾಜ್ಯ

ಪಾಕ್ ಬೆಂಬಲಿಸುವ ಸಂಸ್ಥೆಗಳನ್ನು ನಿಷೇಧಿಸಲು ಸರ್ಕಾರ ಬದ್ಧ: ಆರ್.ಅಶೋಕ್

Shilpa D

ಮೈಸೂರು: ಪಿಎಫ್‌ಐ ಸೇರಿದಂತೆ ಪಾಕ್ ಬೆಂಬಲಿಸುವ ಸಂಸ್ಥೆಗಳನ್ನು ನಿಷೇಧಿಸಬೇಕು ಎಂಬುವವರಲ್ಲಿ ನಾನು ಒಬ್ಬ, ಇಂತಹ ಸಂಘಟನೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಶುಕ್ರವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ, ಕೆಎಫ್‌ಡಿ ಮತ್ತು ಪಿಎಫ್‌ಐ ಸೇರಿದಂತೆ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಿಂಜರಿಯುವುದಿಲ್ಲ, ಕೇಂದ್ರ ಸರ್ಕಾರವೂ ಇದೇ ನಿಲುವು ಹೊಂದಿದೆ. ಆದರೆ ಒಂದು ಸಂಸ್ಥೆ ಬ್ಯಾನ್ ಮಾಡಿದರೇ ಮತ್ತೊಂದು ಹೆಸರಲ್ಲಿ ಬರುತ್ತಾರೆ. ಆದ್ದರಿಂದ ಅವರ ಲೀಡರ್‌ಗಳ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬ್ಯಾನ್ ಮಾಡಲಾಗುವುದು ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆ ಸಂಘಟನೆ ಕಾರ್ಯಕರ್ತರ ವಿರುದ್ಧ 200ಕ್ಕೂ ಹೆಚ್ಚು ಕೇಸ್‌ಗಳನ್ನು ಹಾಕಲಾಗಿತ್ತು. ಬಳಿಕ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಲ್ಲಾ ಕೇಸ್‌ಗಳನ್ನು ಹಿಂತೆಗೆದುಕೊಂಡಿತ್ತು. ಅದರ ಪ್ರತಿಫಲ ಈಗ ಅನುಭವಿಸುತ್ತಿದ್ದೇವೆ ಎಂದು ಕಿಡಿಕಾರಿದರು.

ನಾನು ಗೃಹ ಸಚಿವನಾಗಿದ್ದ ವೇಳೆ ಈ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಂಡಿದ್ದಲ್ಲದೆ ಕೇಂದ್ರದ ಜತೆ ಮಾತುಕತೆಯನ್ನೂ ನಡೆಸಿದ್ದೆ,  ಕೇರಳ ಸರ್ಕಾರ ಕೂಡ ಈ ಸಂಘಟನೆಗಳನ್ನು ನಿಷೇಧಿಸಲು ಬಯಸುತ್ತದೆ, ಆದರೆ ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

SCROLL FOR NEXT