ರಾಜ್ಯ

'ಗೋ ಬ್ಯಾಕ್ ಸಿದ್ದು ಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ' ಘೋಷಣೆ; ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಘೇರಾವ್

Sumana Upadhyaya

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನೆರೆ, ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳ ವೀಕ್ಷಣೆಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗುರುವಾರ ಹೋಗಿದ್ದರು. ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದ ಘಟನೆ ನಡೆದಿದೆ. 

ಕೊಡಗಿನ ಗಡಿ ಭಾಗದ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿ ಘೇರಾವ್ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿದರು.

ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ದರ್ಶನ್ ಜೋಯಪ್ಪ, ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರು ಬಂದು ಬಂದೋಬಸ್ತ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿ ಸಿದ್ದರಾಮಯ್ಯನವರು ಕುಳಿತಿದ್ದ ಕಾರು ಮುಂದೆ ಹೋಗಲು ಅನುವು ಮಾಡಿಕೊಟ್ಟರು.

SCROLL FOR NEXT