ರಾಜ್ಯ

ಮೊಟ್ಟೆ ಎಸೆತ, ಮಾಂಸಹಾರ ಸೇವನೆ ವಿವಾದ: ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಹೆಚ್ಚಿನ ಭದ್ರತೆ, ಮೆಟಲ್ ಡಿಟೆಕ್ಟರ್ ಅಳವಡಿಕೆ

Sumana Upadhyaya

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದ ವೇಳೆ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ದಿನೇ ದಿನೇ ಕಾವೇರುತ್ತಿದೆ. ಈ ಮಧ್ಯೆ ಇದೇ 26ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ 'ಮಡಿಕೇರಿ ಚಲೋ'ಗೆ ನಿಷೇಧಾಜ್ಞೆ ಕಾರ್ಮೋಡ ಕವಿದಿದೆ.

ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ ದಿನೇದಿನೇ ಜೋರಾಗುತ್ತಿದೆ. ಮೊಟ್ಟೆ ಮಹಾಯುದ್ಧದಿಂದ ಈಗ ಸಿದ್ದರಾಮಯ್ಯನವರ ಮಾಂಸಾಹಾರ ಸೇವನೆಯವರೆಗೆ ಬಂದು ನಿಂತಿದೆ. ಈ ಮಧ್ಯೆ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ  ನಿವಾಸಕ್ಕೆ ರಾಜ್ಯ ಸರ್ಕಾರ ವತಿಯಿಂದ ಭದ್ರತೆ ಒದಗಿಸಲಾಗಿದೆ.

ನಗರದ ಶಿವಾನಂದ ವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಈಗಾಗಲೇ ಸಿದ್ದರಾಮಯ್ಯಗೆ ಹೆಚ್ಚಿನ ಭದ್ರತೆ ಒದಗಿಸಿರುವ ರಾಜ್ಯ ಸರ್ಕಾರ ಹೆಚ್ಚುವರಿ ಭದ್ರತಾ ಸಿಬ್ಬಂದಿ ಒದಗಿಸಿತ್ತು. ಇದೀಗ ಅವರ ನಿವಾಸಕ್ಕೆ ಆಗಮಿಸುವ ನಾಗರಿಕರ ಮೇಲೆ ನಿಗಾ ವಹಿಸುವ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.

ಸಿದ್ದರಾಮಯ್ಯಗೆ ಜೀವ ಬೆದರಿಕೆ ಹಾಗೂ ಮೊಟ್ಟೆ ಎಸೆತ ಪ್ರಕರಣದ ಹಿನ್ನೆಲೆಯಲ್ಲಿ ಈ ಭದ್ರತೆ ಒದಗಿಸಿದ್ದು, ಪ್ರತಿಪಕ್ಷ ನಾಯಕರ ನಿವಾಸಕ್ಕೆ ಸದಾ ಸಾರ್ವಜನಿಕರ ಭೇಟಿ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆ ಹೆಚ್ಚಿಸುವ ಆದೇಶದ ಬಳಿಕ ಒಂದೊಂದೇ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಹೆಚ್ಚಿನ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಅದೇ ಪ್ರಕಾರ ನಿನ್ನೆ ಹೆಚ್ಚಿನ ಭದ್ರತೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೀಡಿದ್ದ ಸರ್ಕಾರ ಇಂದು ಇನ್ನಷ್ಟು ಸವಲತ್ತುಗಳನ್ನು ನೀಡಿದೆ.

ಮಡಿಕೇರಿ ಚಲೋ ಅನುಮಾನ?: ಇನ್ನು ನಾಲ್ಕು ದಿನ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಕಾಂಗ್ರೆಸ್ ನಾಯಕರಿಗೆ ಮಡಿಕೇರಿ ಚಲೋಗೆ ಸಮ್ಮತಿ ಸಿಗುವುದು ಅನುಮಾನ ಎನ್ನಲಾಗುತ್ತಿದೆ.ಮತ್ತೊಮ್ಮೆ ಸೂಕ್ತ ಭದ್ರತೆ ಇಲ್ಲದೆ ಕಾಂಗ್ರೆಸ್ ನಾಯಕರು ಕೊಡಗಿಗೆ ಪ್ರವೇಶಿಸುವುದರಿಂದ ಎದುರಾಗಬಹುದಾದ ಅಹಿತಕರ ಘಟನೆಗೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಡಿಕೇರಿ ಚಲೋ ಬಗ್ಗೆ ಅಂತಿಮ ತೀರ್ಮಾನ ಮಾಡದ ಸಿದ್ದರಾಮಯ್ಯನವರು ಇಂದು ಸಂಜೆಯ ಒಳಗೆ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. 

SCROLL FOR NEXT