ರಾಜ್ಯ

ಕುಮಾರಸ್ವಾಮಿ ಬೆಟ್ಟದಲ್ಲಿರುವ 12ನೇ ಶತಮಾನದ ದೇವಾಲಯಕ್ಕೆ ಗಣಿಗಾರಿಕೆಯಿಂದ ಅಪಾಯ!

Ramyashree GN

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಎಡೆಬಿಡದೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಕುಮಾರಸ್ವಾಮಿ ಬೆಟ್ಟ ಎಂದೇ ಕರೆಯಲ್ಪಡುವ ಸ್ವಾಮಿಮಲೈ ಬೆಟ್ಟದಲ್ಲಿರುವ 12ನೇ ಶತಮಾನದ ಪಾರ್ವತಿ ದೇವಸ್ಥಾನಕ್ಕೆ ಅಪಾಯ ಎದುರಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಡಿಯಲ್ಲಿ ಸಂರಕ್ಷಿತವಾಗಿರುವ ಈ ದೇವಾಲಯ ಭಾಗಶಃ ಹಾನಿಗೊಳಗಾಗಿದ್ದು, ಕಟ್ಟಡವನ್ನು ಉಳಿಸಲು ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

'ಎಎಸ್ಐ ನಿಯಮಗಳ ಪ್ರಕಾರ, ಸಂರಕ್ಷಿತ ಸ್ಮಾರಕದ 2 ಕಿಮೀ ವ್ಯಾಪ್ತಿಯೊಳಗೆ ಯಾವುದೇ ಗಣಿಗಾರಿಕೆ ಚಟುವಟಿಕೆಯನ್ನು ತೆಗೆದುಕೊಳ್ಳಬಾರದು' ಎಂದು ಹೇಳಿದೆ. ಆದರೆ, ದೇವಸ್ಥಾನದಿಂದ 600 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕಂಪನಿಗಳು ಗಣಿಗಾರಿಕೆ ಆರಂಭಿಸಿದ್ದು, ದೇವಸ್ಥಾನದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕಳೆದ ವಾರ ಕಟ್ಟಡದ ಒಂದು ಭಾಗ ಕುಸಿದು ದೇವಾಲಯದ ಸುತ್ತುಗೋಡೆಗೆ ಹಾನಿಯಾಗಿದೆ ಎಂದು ಸಂಡೂರಿನ ಗ್ರಾಮಸ್ಥರು ಹೇಳಿದ್ದಾರೆ.

ಹಾನಿಯ ವರದಿ ಸಲ್ಲಿಸಲಿರುವ ಎಎಸ್‌ಐ

ದೇವಾಲಯದ ಹಾನಿಗೆ ಕಾರಣವೇನು ಎಂಬುದನ್ನು ಕಂಡುಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಬಳ್ಳಾರಿಯ ಉಪ ಆಯುಕ್ತ ಪವನ್ ಕುಮಾರ್ ಮಾಲಪತಿ ಟಿಎನ್‌ಐಇಗೆ ತಿಳಿಸಿದ್ದಾರೆ. ಗಣಿ ಉದ್ಯಮವು ಯಾವುದೇ ನಿಯಮವನ್ನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಲಾಗುವುದು. ನಾನು ಈಗಾಗಲೇ ಎಎಸ್‌ಐ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಶೀಘ್ರದಲ್ಲೇ ದೇವಸ್ಥಾನವನ್ನು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ದೇಗುಲದ ಹಾನಿಯನ್ನು ಪರಿಶೀಲನೆಗೆ ಈಗಾಗಲೇ ತಂಡವನ್ನು ಕಳುಹಿಸಲಾಗಿದೆ. ನಾವು ವಿವರವಾದ ವರದಿಯನ್ನು ಕೇಳಿದ್ದೇವೆ. ಗಣಿಗಾರಿಕೆ ಚಟುವಟಿಕೆಗಳಿಂದಲೇ ಹಾನಿ ಸಂಭವಿಸಿದೆಯೇ ಎಂಬುದನ್ನು ಹೇಳಲು ತುಂಬಾ ತಡವಾಗಿದೆ ಎಂದು ಹಂಪಿ ಸರ್ಕಲ್ ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾನಿಗೊಳಗಾದ ದೇಗುಲಗಳ ಭಾಗಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಎಂದು ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಡೂರಿನ ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಆಲದಹಳ್ಳಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇಲ್ಲಿನ ನಿವಾಸಿಗಳು ಪಾರ್ವತಿ ಹಾಗೂ ಕುಮಾರಸ್ವಾಮಿ ದೇವಸ್ಥಾನಗಳನ್ನು ಸಂರಕ್ಷಿಸುವಂತೆ ಆಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ. ಹೊಸಪೇಟೆ ಜಂಬುನಾಥ ದೇಗುಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಎಎಸ್‌ಐ ಸಂರಕ್ಷಿತ ವಲಯದ 2 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಹೇಳಿದೆ. ಕ್ರಮ ಕೈಗೊಳ್ಳದಿದ್ದರೆ ಸಂಡೂರಿನಿಂದ ಪಾದಯಾತ್ರೆ ನಡೆಸುತ್ತೇವೆ ಎಂದರು.

SCROLL FOR NEXT