ಸಾಂದರ್ಭಿಕ ಚಿತ್ರ 
ರಾಜ್ಯ

ಪಿಎಸ್​ಐ ನೇಮಕಾತಿ ಹಗರಣ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಬಂಧನ

ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ ಅವರನ್ನು ಬಂಧಿಸಿದ್ದಾರೆ.

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ ಅವರನ್ನು ಬಂಧಿಸಿದ್ದಾರೆ.

545 ಪಿಎಸ್​ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ 17ನೇ ಆರೋಪಿಯಾಗಿರುವ ರಚನಾ ಹನುಮಂತಳನ್ನು ಸಿಐಡಿ (CID) ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿದೆ. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ ಮೊದಲ ರ‍್ಯಾಂಕ್ ಪಡೆದಿದ್ದರು. ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದರು. 

ಕಳೆದ ಮೂರುವರೆ ತಿಂಗಳಿಂದ ಪೊಲೀಸರ ಕಣ್ಣುತಪ್ಪಿಸಿ ತಿರುಗಾಡುತ್ತಿದ್ದ ರಚನಾ ಒಂದೆಡೆ ನೆಲೆ ನಿಲ್ಲದೇ ಹಲವು ಕಡೆ ವಾಸ್ತವ್ಯ ಬದಲಾಯಿಸಿದ್ದರು. ಈಕೆಗಾಗಿ ಬೆಂಗಳೂರು, ಕಲಬುರಗಿ ಸಿಐಡಿ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಮಹಾರಾಷ್ಟ್ರ ಗಡಿಯಲ್ಲಿರುವ ಜಿಲ್ಲೆಯ ಆಳಂದ ತಾಲ್ಲೂಕಿನ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಸಿಐಡಿ ಡಿಟೆಕ್ಟಿವ್ ಸಬ್‌ ಇನ್‌ಸ್ಪೆಕ್ಟರ್ ಬಸವರಾಜ ನೇತೃತ್ವದ ತಂಡವು ರಚನಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. 

ಇದೀಗ ಶನಿವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ್ ಮುಲ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸಲಾಯಿತು. ರಚನಾ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿದ್ದರಿಂದ ಟ್ರಾನ್ಸಿಟ್ ವಾರೆಂಟ್ ಪಡೆದ ಸಿಐಡಿ ಅಧಿಕಾರಿಗಳು ಶನಿವಾರ ಸಂಜೆ ಬೆಂಗಳೂರಿಗೆ ಕರೆದೊಯ್ದರು. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಪಿಎಸ್‌ಐ ಅಕ್ರಮ ನಡೆದ ಆರೋಪ ಕೇಳಿ ಬಂದಾಗ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಕ್ರಮ ಖಂಡಿಸಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ತನ್ನ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದರು.

ರಚನಾ ವಿರುದ್ದ ಗಂಭೀರ ಆರೋಪ
ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ರಚನಾ ಹೆಸರು ಕೇಳಿ ಬಂದಿತ್ತು. ಸಿಐಡಿ ತನಿಖೆಯಲ್ಲಿ ರಚನಾ 30 ಲಕ್ಷ ನೀಡಿದ್ದರೆಂಬ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಾಗಿತ್ತು. ರಚನಾ ಸರ್ಕಾರದ ಮರುಪರಿಕ್ಷಾ ಆದೇಶದ ವಿರುದ್ಧದ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಳು. ರಚನಾ ಎಫ್ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಳು. ಇದೀಗ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ರಚನಾರನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT