ರಾಜ್ಯ

ಮುರುಘಾ ಶ್ರೀಗಳ ರಾಜೀನಾಮೆಗೆ ಬಿಜೆಪಿ ಎಂಎಲ್ ಸಿ ಎ.ಹೆಚ್ ವಿಶ್ವನಾಥ್ ಒತ್ತಾಯ

Nagaraja AB

ಮೈಸೂರು: ಪೋಕ್ಸೋ ಕಾಯ್ದೆಯಡಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಸ್ ದಾಖಲಾದ ನಂತರ ಅವರ ರಾಜೀನಾಮೆಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎ.ಹೆಚ್ ವಿಶ್ವನಾಥ್ ಆಗ್ರಹಿಸಿದ್ದಾರೆ. ತನಿಖೆ ಮುಗಿದು ಆರೋಪ ಮುಕ್ತರಾದ ನಂತರ ಅವರು ಮತ್ತೆ ಅಧಿಕಾರ ವಹಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದರಿಂದ ಮುರುಘಾ ಶ್ರೀಗಳು ಹಾಗೂ ಅವರ ಭಕ್ತಾಧಿಗಳ ವರ್ಚಸ್ಸು ಸುಧಾರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮುರುಘಾ ಶ್ರೀಗಳನ್ನು ಕೂಡಲೇ ಸರ್ಕಾರ ಬಂಧಿಸಬೇಕು, ಪೋಕ್ಸೋ ಕಾಯ್ದೆ ಆರೋಪ ಕೇಳಿಬಂದವರನ್ನು 24 ಗಂಟೆಗಳಲ್ಲಿ ಬಂಧಿಸಬೇಕು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು. 

ಶ್ರೀಗಳ ಪರ ಅವರ ಅಭಿಮಾನಿಗಳು ಘೋಷಣೆ ಕೂಗುವುದನ್ನು ಪ್ರಶ್ನಿಸಿದ ವಿಶ್ವನಾಥ್, ಇತ್ತೀಚಿನ ಬೆಳವಣಿಗೆ ಜನರ ಭಾವನೆಗೆ ಧಕ್ಕೆ ತಂದಿದೆ. ರಾಜ್ಯದ ವರ್ಚಸ್ಸಿಗೆ ಧಕ್ಕೆ ತಂದಿದೆ. ಅಮಾಯಕ ಬಾಲಕಿಯರಿಗೆ ನ್ಯಾಯ ಸಿಗಬೇಕಾಗಿದೆ ಎಂದು ಅವರು ಒತ್ತಾಯಿಸಿದರು.  ಈ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೌನವನ್ನು ಪ್ರಶ್ನಿಸಿದ ವಿಶ್ವನಾಥ್, ಕೇಸ್ ನ ಸಮಗ್ರ ವಿವರ ಪಡೆದ ಪ್ರಧಾನ ಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. 

SCROLL FOR NEXT