ರಾಜ್ಯ

ರಾಯಬಾಗ: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗೆ ಪರಭಾರೆ; ಮೂವರು ಅಧಿಕಾರಿಗಳ ಅಮಾನತು, ಒತ್ತುವರಿ ತೆರವು

Lingaraj Badiger

ಬೆಳಗಾವಿ: ರಾಯಬಾಗ ಪಟ್ಟಣದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಕೊನೆಗೂ ತೆರವುಗೊಳಿಸಲಾಗಿದ್ದು, ಆ ಜಾಗಕ್ಕೆ ತಂತಿ ಬೇಲಿ ಹಾಕಲಾಗಿದೆ.

'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ರಾಯಬಾಗ ಪಟ್ಟಣದಲ್ಲಿ ಖಾಸಗಿ ವ್ಯಕ್ತಿಯ 'ಭೂ ಕಬಳಿಕೆ'ಯನ್ನು ಬಯಲಿಗೆಳೆದಿತ್ತು.

ರಾಯಬಾಗ ಪಟ್ಟಣದಲ್ಲಿ ಮೀನುಗಾರಿಕೆ ಇಲಾಖೆ ಸೇರಿದ 1 ಎಕರೆ 20 ಗುಂಟಾ ಜಮೀನಿನಲ್ಲಿ 65x70 ಅಡಿ ವಿಸ್ತೀರ್ಣದಲ್ಲಿ ಖಾಸಗಿ ವ್ಯಕ್ತಿಗಳು ಅಂಗಡಿಗಳನ್ನು ನಿರ್ಮಿಸಿದ್ದರು. ಅಲ್ಲದೆ ಮೀನುಗಾರಿಕೆ ಇಲಾಖೆಗೆ ಸೇರಿದ್ದ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರಿಗೆ ಪರಭಾರೆ ಮಾಡಲಾಗಿತ್ತು.

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳು ತನಿಖೆ ಆದೇಶಿಸಿದ್ದು, ಬೆಳಗಾವಿ ಡಿಸಿ ಡಾ.ನಿತೇಶ್ ಪಾಟೀಲ್ ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ವಿಚಾರಣೆ ನಡೆಸಿದಾಗ, ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪರಭಾರೆ ಮಾಡಿರುವುದು ಕಂಡುಬಂದಿದೆ. ಅವರು ತನಿಖೆಯ ಸಮಗ್ರ ವರದಿಯನ್ನು ವಾಸ್ತವಾಂಶಗಳೊಂದಿಗೆ ಪೌರಾಡಳಿತ ಇಲಾಖೆಗೆ ಸಲ್ಲಿಸಿದ್ದರು.

ವರದಿ ಆಧರಿಸಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ, ರಾಯಬಾಗ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಂಜೀವ್ ಮಾಂಗ್, ಬಿಲ್ ಕಲೆಕ್ಟರ್ ವೆಂಕಟೇಶ ಚಲವಾದಿ ಮತ್ತು ಕಂದಾಯ ನಿರೀಕ್ಷಕ ಬಿ.ಲಕ್ಷ್ಮೀಶ ಅವರನ್ನು ಅಮಾನತುಗೊಳಿಸಿದೆ.

ಈಗ ರಾಯಬಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಮೀನಿನ ಒತ್ತುವರಿ ತೆರವು ಮಾಡಿ ತಂತಿ ಬೇಲಿ ಅಳವಡಿಸಿ ರಕ್ಷಣೆ ಮಾಡಿದ್ದಾರೆ.

ಅಲ್ಲದೆ, ಭೂಕಬಳಿಕೆ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವ ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ, ಈ ಹಗರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

SCROLL FOR NEXT