ರಾಜ್ಯ

ಬೆಂಗಳೂರು: ಬೇಕರಿಗೆ ನುಗ್ಗಿ ಗೂಂಡಾಗಳಿಂದ ಕೆಲಸಗಾರರ ಮೇಲೆ ಹಲ್ಲೆ, ಮೂವರ ಬಂಧನ

Ramyashree GN

ಬೆಂಗಳೂರು: ಗುರುವಾರ ಮಧ್ಯರಾತ್ರಿ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಬಳಿ ಗೂಂಡಾಗಳ ಗುಂಪೊಂದು ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಬೇಕರಿಯಲ್ಲಿ ಕೆಲಸ ಮಾಡುವವರನ್ನು ಥಳಿಸಿದೆ. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

ಎಚ್‌ಎಎಲ್‌ನ ಅಶ್ವತ್ಥ್ ನಗರದ ನಿವಾಸಿ ಡೆಲಿವರಿ ಬಾಯ್ ಕಾರ್ತಿಕ್ (20), ಕೆಂಗೇರಿಯಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮಾರತ್ತಹಳ್ಳಿ ನಿವಾಸಿ ಕಾರ್ತಿಕ್ (23), ಅಲ್ಯುಮಿನಿಯಂ ಘಟಕದಲ್ಲಿ ಕೆಲಸ ಮಾಡುವ ಅಶ್ವತ್ಥ್ ನಗರದ ಸಲ್ಮಾನ್ (20) ಆರೋಪಿಗಳು.

ಶುಕ್ರವಾರ ಮಧ್ಯರಾತ್ರಿ 12.10ರ ಸುಮಾರಿಗೆ ಶ್ರೀ ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಆರೋಪಿಗಳು ಸಿಗರೇಟ್ ಖರೀದಿಸಲು ಹೋದಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಇಬ್ಬರು ಕಾರ್ಮಿಕರ ಮೇಲೆ ಮಾರಾಮಾರಿ ನಡೆಸಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬಾತ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದರೆ, ಇತರರು ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

'ಅಂಗಡಿ ಮಾಲೀಕರಿಗೆ ತೊಂದರೆ ನೀಡುವ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವವರನ್ನು ಬಿಡಬಾರದು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ' ಎಂದು ಅವರು ಹೇಳಿದರು.

ಶುಕ್ರವಾರ ಮಧ್ಯಾಹ್ನ ಎಚ್‌ಎಎಲ್ ಪೊಲೀಸರಿಗೆ ಈ ವಿಚಾರ ತಿಳಿದಿದ್ದು, ಸಂಜೆ ಆರೋಪಿಗಳನ್ನು ಬಂಧಿಸಿದ್ದಾರೆ. 'ಪ್ರಾಥಮಿಕ ವಿಚಾರಣೆಯಲ್ಲಿ, ಕೆಲಸಗಾರರೊಬ್ಬರು ತಮ್ಮೊಂದಿಗೆ ಅಸಭ್ಯವಾಗಿ ಮಾತನಾಡಿದರು ಮತ್ತು ಅವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಗಳು ಹೇಳಿರುವುದಾಗಿ ವೈಟ್‌ಫೀಲ್ಡ್ ಡಿಸಿಪಿ ಎಸ್ ಗಿರೀಶ್ ಟಿಎನ್ಐಇಗೆ ತಿಳಿಸಿದ್ದಾರೆ.

ಸಂತ್ರಸ್ತರು ಪೊಲೀಸರಿಗೆ ದೂರು ನೀಡಲು ವಿಳಂಬ ಮಾಡಿದ್ದಾರೆ. ಘಟನೆ ನಡೆದ 12 ಗಂಟೆಗಳ ನಂತರ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ, ದಾಳಿಯ ಬಗ್ಗೆ ನಮ್ಮ ಗಮನಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಮಧ್ಯೆ, ವ್ಯಾಪಾರಿ ಸಂಘಟನೆಯ ಸದಸ್ಯರು ಅಂಗಡಿ ಮಾಲೀಕರಿಗೆ ರಕ್ಷಣೆ ನೀಡುವಂತೆ ಎಚ್‌ಎಎಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.

SCROLL FOR NEXT