ರಾಜ್ಯ

ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ, ಆತಂಕ

Manjula VN

ಬೆಂಗಳೂರು: ರಾಜ್ಯದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿ ಹೋಗಿದೆ.

ಕಳೆದ ವಾರ ಬೆಳಗಾವಿಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಶಾಲೆಯಿಂದ ವಾಪಸಾಗುತ್ತಿದ್ದಾಗ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಈ ದಾಳಿಗೆ ಬಾಲಕಿ ಬಲಿಯಾಗಿದ್ದಳು, ಭದ್ರಾವತಿಯಲ್ಲಿ ಬೀದಿನಾಯಿಗಳ ಹಿಂಡು ಮೂರು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ ಪರಿಣಾಮ ಬಾಲಕ ಮೃತಪಟ್ಟಿದ್ದ.

ಶಿವಮೊಗ್ಗದ ಪುರಲೆಯಲ್ಲಿಯೂ ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಇನ್ನು ಗದಗದಲ್ಲಿ ಬೀದಿ ನಾಯಿಗಳು ಕಚ್ಚಿದ ಪರಿಣಾಮ ಮಗುವಿನ ಕುತ್ತಿಗೆಗೆ 15 ಹೊಲಿಗೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಇವಿಷ್ಟು ಬೆಳಕಿಗೆ ಬಂದಿರುವ ಪ್ರಕರಣಗಳಾಗಿದ್ದಾರೆ, ಇನ್ನೂ ಸಾಕಷ್ಟು ಪ್ರಕರಣಗಳು ವರದಿಯಾಗಿಲ್ಲ ಈ ಬೆಳವಣಿಗೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಬೀದಿ ನಾಯಿಗಳು ಜನರ ಮೇಲೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಮತ್ತು ತಡರಾತ್ರಿ ಬೈಕ್ ಸವಾರರ ಮೇಲೆ ದಾಳಿ ಮಾಡುವ ಘಟನೆಗಳು ರಾಜ್ಯಾದ್ಯಂತ ಹೆಚ್ಚಿವೆ.

ಪಶುಸಂಗೋಪನಾ ಇಲಾಖೆಯ ತಜ್ಞರು ಮತ್ತು ಅಧಿಕಾರಿಗಳು ಮಾತನಾಡಿ, ಜನನ ನಿಯಂತ್ರಣ ಕಾರ್ಯಕ್ರಮದ (ಎಬಿಸಿ) ಅಸಮರ್ಪಕತೆ ಇದಕ್ಕೆ ಕಾರಣವಾಗಿದೆ. ಅನೇಕ ಎನ್‌ಜಿಒಗಳು ಮುನ್ಸಿಪಲ್ ಕಾರ್ಪೊರೇಷನ್‌ಗಳ ಪರವಾಗಿ ಕಾರ್ಯಾಚರಣೆ ಕೈಗೊಳ್ಳಲು ಉತ್ಸುಕರಾಗಿದ್ದರೂ, ಅಸಮರ್ಪಕ ಹಣ ಹಂಚಿಕೆಯು ಇದಕ್ಕೆ ತಡೆಯೊಡ್ಡಿದೆ ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಈ ವರ್ಷ 250 ಜನರು ರೇಬಿಸ್‌ನಿಂದ ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಕರ್ನಾಟಕದ 32 ಮಂದಿ ಆಗಿದ್ದಾರೆಂದು ತಿಳಿಸಿದೆ.

ಕೆಲವರು ಆಂಟಿ ರೇಬಿಸ್ ಲಸಿಕೆ ತೆಗೆದುಕೊಂಡರೂ ಕೂಡ ಸಾವನ್ನಪ್ಪಿದ್ದಾರೆಂದು ವರದಿ ಹೇಳಿದೆ. 20,000 ಭಾರತೀಯರು ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ.60ರಷ್ಟು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆಂದು ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳನ್ನು ಹೊರತುಪಡಿಸಿ ಭಾರತದಾದ್ಯಂತ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಸಚಿವಾಲಯ ಸೇರಿಸಲಾಗಿದೆ.

ಪ್ರಾಣಿ ಸಂರಕ್ಷಣೆದಾರರು ಮತ್ತು ನಗರ ಪಾಲಿಕೆಗಳ ನಡುವಿನ ಜಗ್ಗಜಗ್ಗಾಟವು ಬೀದಿನಾಯಿಗಳ ಸಂಖ್ಯೆ ಮತ್ತು ನಾಯಿಗಳ ದಾಳಿಯ ಹೆಚ್ಚಳಕ್ಕೆ ಮತ್ತೊಂದು ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಾಣಿಗಳಿಗೆ ಆಹಾರ ನೀಡುವವರು ಮತ್ತು ಇತರರ ನಡುವೆ ಘರ್ಷಣೆಗಳು ನಡೆದಿದೆ. ಪ್ರಾಣಿ ಪ್ರಿಯರಿಗೆ ಅನಿಮಲ್ ಫೀಡರ್ ಕಾರ್ಡ್ ನೀಡುವ ಪರಿಕಲ್ಪನೆ 2012 ರಲ್ಲಿ ಪ್ರಾರಂಭವಾಯಿತು, ಆದರೆ, ಇದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈ ಕಾರ್ಡ್ ನಾಗರಿಕರಿಗೆ ನಾಯಿಗಳಿಗೆ ಆಹಾರ ನೀಡಲು ಪರವಾನಗಿ ನೀಡುತ್ತದೆ, ಆದರೆ ಅದನ್ನು ಹೊಂದಿಲ್ಲದ ಮತ್ತು ನಾಯಿಗಳಿಗೆ ಆಹಾರವನ್ನು ನೀಡುವವರನ್ನು ನಿಲ್ಲಿಸಿ ಪುರಸಭೆಗೆ ವರದಿ ಮಾಡಬಹುದು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಈ ಕಾರ್ಡ್‌ಗಳನ್ನು ನೀಡಲಾಗುತ್ತದೆ, ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಅಂತಹ ಪ್ರಾಣಿ ಪ್ರೇಮಿಗಳ ಸಂಖ್ಯೆಯ ವರದಿಯನ್ನು ಹೊಂದಿಲ್ಲ. ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಯಾವುದೇ ಕಾರ್ಡ್ ನೀಡಲಾಗಿಲ್ಲ. ಆದರೆ ಮಡಿಕೇರಿ ಮುಂತಾದ ಕಡೆ ಫೀಡರ್ ಗಳು ಎಬಿಸಿ ಕಾರ್ಯಕ್ರಮಕ್ಕೆ ನಾಯಿ ಹಿಡಿಯಲು ನಗರಸಭೆಗೆ ನೆರವಾಗುತ್ತಿದ್ದಾರೆ.

ಸರ್ಕಾರಿ ಸಂಸ್ಥೆಗಳು, ಪ್ರಾಣಿ ಹಕ್ಕು ಕಾರ್ಯಕರ್ತರು, ಫೀಡರ್‌ಗಳು ಮತ್ತು ನಾಗರಿಕರ ನಡುವಿನ ಘರ್ಷಣೆಯ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರವು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸಿ (STCA) ಅಭಿಯಾನವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ, ಅಲ್ಲಿ ಫೀಡರ್‌ಗಳು ಮತ್ತು ಇತರ ಮಧ್ಯಸ್ಥಗಾರರಿಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಕರಣಗಳನ್ನು ನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಈ ಮೂಲಕ ನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪಶುಸಂಗೋಪನಾ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಡಾ.ಪರ್ವೇಜ್ ಪಿರಾನ್ ಮಾತನಾಡಿ, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು, ಯಾವುದೇ ಅಂತರವಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ. “ಮೂರು ಗಂಡು ನಾಯಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಪ್ರತಿ ಹೆಣ್ಣನ್ನು ಎಬಿಸಿ ಕಾರ್ಯಕ್ರಮಕ್ಕೆ ಸೆರೆಹಿಡಿಯುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಮಾಡುವುದು ಸುಲಭವಲ್ಲಯ ಆದರೆ ಎಲ್ಲರ ಸಹಕಾರದಿಂದ ಅದು ಸಾಧ್ಯ. ಫೀಡರ್‌ಗಳು ಸೇರಿದಂತೆ ನಾಗರಿಕರು ಪ್ರಾಣಿಗಳನ್ನು ಸೆರೆಹಿಡಿಯುವಲ್ಲಿ ಮತ್ತು ಸಂತಾನಹರಣಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಇದಕ್ಕೆ ದೊಡ್ಡ ಮೂಲಸೌಕರ್ಯಗಳ ಅಗತ್ಯವಿಲ್ಲ. "ಹಿಂದೆ ಅನುಸರಿಸಿದ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು. ನಾಯಿಯನ್ನು ಸೆರೆಹಿಡಿದು, ಸಂತಾನಹರಣ ಮಾಡಿ ಅದೇ ಸ್ಥಳದಲ್ಲಿ ಬಿಡಲಾಗುತ್ತದೆ. ಇದು ಅವರ ಪ್ರದೇಶಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ ಮತ್ತು ಇದರಿಂದ ಬೀದಿನಾಯಿಗಳ ಸಂಖ್ಯೆ ಕೂಡ ನಿಯಂತ್ರಣದಲ್ಲಿರುತ್ತದೆ ಎಂದು ವಿವರಿಸಿದರು.

ಎಬಿಸಿ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವ ಕಾರ್ಯಕರ್ತರೊಬ್ಬರು ಮಾತನಾಡಿ, ನಾಯಿ ಹಿಡಿಯುವ ವಾಹನಗಳು ಬಂದಾಗ ಅನೇಕ ಜನರು ತಮ್ಮ ಮನೆಗಳಲ್ಲಿ ನಾಯಿಗಳನ್ನು ಆಶ್ರಯಿಸಲು ಅವಕಾಶ ಮಾಡಿಕೊಡುತ್ತಾರೆ. ಇದನ್ನು ಅನುಮತಿಸಬಾರದು ಎಂದು ಹೇಳಿದರು.

"ಎಬಿಸಿ ಕಾರ್ಯಕ್ರಮದ ಗಮನವು ಸುಮಾರು 800 ಚದರ ಕಿಮೀ ಪ್ರದೇಶದಲ್ಲಿ ಮಾತ್ರ ಇದೆ, ಆದರೆ ಹೊಸ ವಾರ್ಡ್‌ಗಳು ಮತ್ತು ವಿಸ್ತರಿಸುವ ಗಡಿಗಳನ್ನು ಒಳಗೊಂಡಿಲ್ಲ ಮತ್ತು ಹೊಸ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ಮುಂದುವರಿದಿದೆ ಎಂದು ತಿಳಿಸಿದರು.

ಪ್ರಾಣಿ ಪರ ಹೋರಾಟಗಾರರು ಮಾತನಾಡಿ, ನಾಯಿಗಳು ಕಾಡಿಗಳಿಗೆ ಹೋಗುತ್ತಿರುವುದು, ಕಾಡು ಪ್ರಾಣಿಗಳ ಮೇಲೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಸುತ್ತಮುತ್ತಲಿನ ಕಾಡುಗಳಲ್ಲಿ ಬೀದಿ ನಾಯಿಗಳು ನವಿಲು ಅಥವಾ ಜಿಂಕೆಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲಾಗುತ್ತಿದ್ದು, ಇದರಿಂದ ವನ್ಯಜೀವಿಗಳಿಗೆ ಅಪಾಯ ತಂದೊಡ್ಡುತ್ತಿದೆ. ದಾಂಡೇಲಿ ಮತ್ತು ಚಾಮರಾಜನಗರದಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಜಾನುವಾರುಗಳ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದ್ದು, ಬೆಳಗಾವಿಯಲ್ಲಿ 20 ಬೀದಿ ನಾಯಿಗಳು ದಾಳಿ ಮಾಡಿ 12 ಕುರಿಗಳನ್ನು ಕೊಂದು ಹಾಕಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2019 ರ ಸಮೀಕ್ಷೆಯ ವರದಿಯ ಪ್ರಕಾರ ಬೆಂಗಳೂರಿನಲ್ಲಿ 1.5 ಲಕ್ಷ ಬೀದಿ ನಾಯಿಗಳಿವೆ ಎಂದು ಬಿಬಿಎಂಪಿ ಹೇಳಿದೆ, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಇವುಗಳ ಸಂಖ್ಯೆಯನ್ನು ಮರುಪರಿಶೀಲಿಸಲಾಗಿಲ್ಲ ಎಂದು ತಿಳಿಸಿದೆ.

ಬಿಬಿಎಂಪಿ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ರವಿಕುಮಾರ್ ಮಾತನಾಡಿ, ಪ್ರತಿ ತಿಂಗಳು ಸರಾಸರಿ 600 ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಹಾಕಲಾಗುತ್ತಿದ್ದು, ಪ್ರತಿದಿನ ನಾಲ್ಕು ನಾಯಿಗಳನ್ನು ಸೆರೆಹಿಡಿಯಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪ್ರಾಣಿಗಳಿಗೆ ಆಹಾರ ನೀಡುವವರು ಅವುಗಳ ಬಗ್ಗೆಯೂ ಕಾಳಜಿ ವಹಿಸಬೇಕು (ಲಸಿಕೆ ಮತ್ತು ಕ್ರಿಮಿನಾಶಕ). ಆದರೆ ಅದು ಆಗುತ್ತಿಲ್ಲ. ಬಿಬಿಎಂಪಿ ಕೇವಲ 71 ಪ್ರತಿಶತ ನಾಯಿಗಳಿಗೆ ಲಸಿಕೆ ಹಾಕಲು ಸಮರ್ಥವಾಗಿದೆ, ಆದರೆ, ಇದು ಅವುಗಳ ಸಂತಾನೋತ್ಪತ್ತಿ ಚಕ್ರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಕೆಲವರು ಮಾತ್ರ ಸ್ಥಳೀಯ ತಳಿಯ ನಾಯಿಗಳನ್ನು ದತ್ತು ಪಡೆಯುತ್ತಾರೆ ಎಂದು ತಿಳಿಸಿದರು.

ಏಪ್ರಿಲ್‌ನಿಂದ ಅಕ್ಟೋಬರ್ 2022 ರವರೆಗೆ, 28,341 ನಾಯಿಗಳು ಎಬಿಸಿ ಕಾರ್ಯಕ್ರಮಕ್ಕೆ ಒಳಗಾಗಿದ್ದರೆ, 52,635 ನಾಯಿಗಳಿಗೆ ರೇಬೀಸ್‌ಗೆ ಲಸಿಕೆ ಹಾಕಲಾಗಿದೆ. ಈ ಅವಧಿಯಲ್ಲಿ ನಾಯಿ ಕಡಿತದಿಂದ ಯಾವುದೇ ಸಾವು ಸಂಭವಿಸಿಲ್ಲ,

ಈ ವರೆಗೂ 17,610 ನಾಯಿ ಕಡಿತ ಪ್ರಕರಣಗಳು ದಾಖಲಾಗದ್ದು, ಬಿಬಿಎಂಪಿ ಮತ್ತು ಎನ್‌ಜಿಒಗಳಿಗೆ 3,217 ಶ್ವಾನಗಳ ರಕ್ಷಣೆ ಮಾಡುವಂತೆ ದೂರವಾಣಿ ಕರೆಗಳು ಬಂದಿವೆ ಎಂದು ಬಿಬಿಎಂಪಿ ವರದಿಯಲ್ಲಿ ತಿಳಿಸಿದೆ.

SCROLL FOR NEXT