ರಾಜ್ಯ

ಮಕ್ಕಳ ಉತ್ತಮ ಕಲಿಕೆಗಾಗಿ ರೇಡಿಯೋ ಕಾರ್ಯಕ್ರಮಗಳ ಆರಂಭಿಸಲು ಸರ್ಕಾರ ಮುಂದು!

Manjula VN

ಬೆಂಗಳೂರು: ಮಕ್ಕಳಲ್ಲಿ ಕಲಿಕೆಯನ್ನು ಹೆಚ್ಚು ಆಸಕ್ತಿಕರಗೊಳಿಸುವ ಸಲುವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವಿದ್ಯಾರ್ಥಿಗಳಿಗಾಗಿ ರೇಡಿಯೋ ಕಾರ್ಯಕ್ರಮಗಳ ಆರಂಭಿಸಲು ಮುಂದಾಗಿದೆ.

ಡಿಸೆಂಬರ್ 12 ರ ವೇಳೆಗೆ, ಡಿಎಸ್‌ಇಆರ್‌ಟಿ ಹೆಸರಿಸಿರುವ ಬಾನ್ ಧನಿ ಕಾರ್ಯಕ್ರಮವು ನೀತಿಶಾಸ್ತ್ರ, ಯೋಗ, ಆರೋಗ್ಯ, ಇಂಗ್ಲಿಷ್, ಕನ್ನಡ ಭಾಷೆಗಳು ಮತ್ತು ಗಣಿತದ ಪಾಠಗಳನ್ನು ಒಳಗೊಂಡಿರುತ್ತದೆ.

ರಾಜ್ಯದ 13 ರೇಡಿಯೋ ಕೇಂದ್ರಗಳು ಮತ್ತು ಮೂರು ವಿವಿಧ ಭಾರತಿ ಕೇಂದ್ರಗಳಿಂದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳನ್ನು ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಯೂಟ್ಯೂಬ್ ಚಾನೆಲ್‌ನಲ್ಲಿಯೂ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಡಿಎಸ್‌ಇಆರ್‌ಟಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಬಾನ್​ ದನಿ ಕಾರ್ಯಕ್ರಮವು ಸೋಮವಾರದಿಂದ ಗುರುವಾರ ಪ್ರಸಾರವಾಗಲಿದೆ. ಮಧ್ಯಾಹ್ನ 2:35ರಿಂದ 3 ಗಂಟೆವರೆಗೆ ಮಕ್ಕಳಿಗೆ ಪಾಠ ನೀಡಲಾಗುತ್ತದೆ. ಪ್ರಸಾರ ಭಾರತಿ ಬಾನ್​ದನಿ ಕಾರ್ಯಕ್ರಮವು 1 ರಿಂದ 9ನೇ ತರಗತಿಯ ಎಲ್ಲಾ ಮಕ್ಕಳಿಗೂ ಇರಲಿದೆ. ಶಾಲಾ ತರಗತಿಯಲ್ಲಿ ಪಾಠ ಕೇಳುವುದಕ್ಕಿಂತ ರೇಡಿಯೋ ಪಾಠ ಕೇಳಲು ವಿಶೇಷವೆನಿಸಿ ಮಕ್ಕಳಲ್ಲಿ ಆಸಕ್ತಿ ಮೂಡಬಹುದು. ಮಕ್ಕಳು ಕಾರ್ಯಕ್ರಮಗಳನ್ನು ಆಲಿಸಲು ಸಮರ್ಥರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳಿಗೆ ಡಿಎಸ್‌ಇಆರ್‌ಟಿ ಸೂಚನೆಗಳನ್ನು ನೀಡಿದೆ.

ಸೂಚನೆಯಲ್ಲಿ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಹಿರಿಯ ಉಪನ್ಯಾಸಕರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಿಸುವುದು ಮತ್ತು ಶಾಲೆಯೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ಪಾಠಗಳನ್ನು ಕೇಳಲು ಅನುವಾಗುವಂತೆ ವೇಳಾಪಟ್ಟಿ ಸಿದ್ಧಪಡಿಸುವಂತೆ  ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದೆ.

SCROLL FOR NEXT