ಬೆಂಗಳೂರು: ಮೀನುಗಾರರ ಬಲೆಗೆ ಸಿಲುಕಿ ದೊಡ್ಡ ಕಾರ್ಮೊರೆಂಟ್ (ನೀರುಕಾಗೆ) ಪಕ್ಷಿ ಸಾವನ್ನಪ್ಪಿರುವ ಘಟನೆ ಪುಟ್ಟೇನಹಳ್ಳಿ ಕೆರೆಯಲ್ಲಿ ಮಂಗಳವಾರ ನಡೆದಿದೆ.
ಕೆರೆಯ ಸುತ್ತಲಿನ ಸಸ್ಯ ಮತ್ತು ಪ್ರಾಣಿಗಳನ್ನು ಛಾಯಾಚಿತ್ರಗಳನ್ನು ಸ್ಥಳೀಯ ನಿವಾಸಿ ಕೆ ಶ್ರೀನಿವಾಸ್ ಅವರು ತೆಗೆಯುತ್ತಿದ್ದು, ಅವರು ನಿನ್ನೆ ಹಾಕಿದ್ದ ಬ್ಲಾಗ್ ಪೋಸ್ಟ್ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಮೀನುಗಾರಿಕಾ ಬಲೆಯಲ್ಲಿಕಾರ್ಮೊರೆಂಟ್ ಪಕ್ಷಿಯ ರೆಕ್ಕೆ ಸಿಲುಕಿಕೊಂಡಿದ್ದು, ಹಾರಲು ಸಾಧ್ಯವಾಗದೆ ಪರದಾಡುತ್ತಿದ್ದ ಚಿತ್ರಗಳನ್ನು ಶ್ರೀನಿವಾಸ್ ಅವರು ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ತೆಗೆಯುತ್ತಿದ್ದ ವೇಳೆ ಪಕ್ಷ ಸಂಕಷ್ಟ ಪಡುತ್ತಿದ್ದನ್ನು ಶ್ರೀನಿವಾಸ್ ಅವರು ಗಮನಿಸಿದ್ದಾರೆ. ಈ ವೇಳೆ ಸ್ಥಳೀಯರೂ ಕೂಡ ಇದನ್ನು ಗಮಿಸಿದ್ದಾರೆ, ಸಾಕಷ್ಟು ಶ್ರಮದ ಬಳಿಕ ಶ್ರೀನಿವಾಸ್ ಅವರು ಪಕ್ಷವನ್ನು ಹಿಡಿದು ಏವಿಯನ್ ಮತ್ತು ಸರೀಸೃಪ ಪುನರ್ವಸತಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪಕ್ಷಿ ಸಾವನ್ನಪ್ಪಿದೆ. ಹಸಿವು ಹಾಗೂ ಬಳಲಿಕೆಯಿಂದಾಗಿ ಪಕ್ಷಿ ಸಾವನ್ನಪ್ಪಿದೆ ಎಂದು ಶ್ರೀನಿವಾಸ್ ಅವರು ಹೇಳಿದ್ದಾರೆ.
ಕೆರೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಪಕ್ಷಿಗಳು ಬಲೆ ಅಥವಾ ದಾರಗಳಿಗೆ ಸಿಕ್ಕಿಹಾಕಿಕೊಂಡ ಉದಾಹರಣೆಗಳಿವೆ ಎಂದು ಸ್ಥಲೀಯ ನಿವಾಸಿಗಳು ಹೇಳಿದ್ದಾರೆ.