ರಾಜ್ಯ

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ ಗೌರವಧನ ದ್ವಿಗುಣಗೊಳಿಸಿ: ರಾಜ್ಯ ಸರ್ಕಾರ ಆದೇಶ

Manjula VN

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಈವರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3 ಸಾವಿರ ರೂ. ಉಪಾಧ್ಯಕ್ಷರು 2 ಸಾವಿರ ರೂ. ಹಾಗೂ ಸದಸ್ಯರಿಗೆ 1 ಸಾವಿರ ರೂ. ಮಾಸಿಕ ಗೌರವ ಧನ ನೀಡಲಾಗುತ್ತಿತ್ತು. ಇದೀಗ ಅಧ್ಯಕ್ಷರಿಗೆ 6 ಸಾವಿರ ರೂ. ಉಪಾಧ್ಯಕ್ಷರಿಗೆ 4 ಸಾವಿರ ರೂ. ಹಾಗೂ ಸದಸ್ಯರಿಗೆ 2 ಸಾವಿರ ರೂ. ಗೌರವಧನ ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿದ್ದ ಗೌರವಧನ ತುಂಬಾ ಕಡಿಮೆ ಇದ್ದು, ಗೌರವಧನ ಪರಿಷ್ಕರಿಸಿ 5 ವರ್ಷಗಳು ಕಳೆದಿವೆ. ಆದ್ದರಿಂದ ನೀಡುತ್ತಿರುವ ಗೌರವಧನ ಸದ್ಯ ಬೆಲೆ ಏರಿಕೆಯಿಂದಾಗಿ ಏತಕ್ಕೂ ಸಾಲದಾಗಿದೆ. ಕೂಡಲೇ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಗೌರವಧನವನ್ನು ಹೆಚ್ಚಿಸುವಂತೆ ಬಹುದಿನಗಳಿಂದ ಬೇಡಿಕೆ ಇತ್ತು. ಇದೀಗ ಸರ್ಕಾರ ಗ್ರಾ.ಪಂ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಗೌರವಧನ ದ್ವಿಗುಣಗೊಳಿಸಿದೆ.

ಈ ಹಿಂದೆ ಹೇಳಿಕೆ ನೀಡಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು,  ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಹೆಚ್ಚಳ ಮಾಡುವ ಸಂಬಂಧ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪರಿಷತ್‌ ಸದಸ್ಯ ಸುನೀಲ್ ಗೌಡ ಪಾಟೀಲ್‌ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಪರ ಉತ್ತರಿಸಿದ್ದ ಅವರು, ಗೌರವಧನ ಹೆಚ್ಚಿಸುವ ಕುರಿತು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

SCROLL FOR NEXT