ರಾಜ್ಯ

ಬೆಂಗಳೂರು: ಅಪಹರಣಗೊಂಡ 5 ದಿನಗಳಲ್ಲೇ ಬಾಲಕನ ರಕ್ಷಿಸಿದ ರೈಲ್ವೇ ಪೊಲೀಸರು!

Manjula VN

ಬೆಂಗಳೂರು: ಅಪಹರಣಗೊಂಡ 5 ದಿನಗಳಲ್ಲೇ 17 ವರ್ಷದ ಬಾಲಕನನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಸೋಮವಾರ ರಕ್ಷಣೆ ಮಾಡಿದ್ದಾರೆ.

ವಾಟ್ಸಾಪ್ ನಲ್ಲಿ ಪರಿಚಯಗೊಂಡಿದ್ದ ಪ್ರಭಾತ್ ಎಂಬಾತನನ್ನು ನಂಬಿದ್ದ ಬಾಲಕ ರೈಲಿನಲ್ಲಿ ಅಹ್ಮದಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದಾನೆ. ಬಾಲಕನ ಮನವೊಲಿಸಿದ್ದ ಆರೋಪಿ ಚಿಕ್ಕಬಾಣಾವರದಲ್ಲಿ ಇಳಿಯುವಂತೆ ಮನವೊಲಿಸಿದ್ದಾನೆ. ಇದರಂತೆ ಬಾಲಕ ಚಿಕ್ಕಬಾಣಾವರಕ್ಕೆ ಬಂದಿದ್ದು, ಬಳಿಕ ತನ್ನೊಂದಿಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕನ ವಿಡಿಯೋ ಮಾಡಿದ ಆರೋಪಿಗಳು, ಹಣ ನೀಡುವಂತೆ ಒತ್ತಾಯಿಸಿದ್ದಾರೆ.

ಬಾಲಕನ ತಂದೆ ಬಿಹಾರ ಮೂಲದವರಾಗಿದ್ದು, ಮಗನನ್ನು ಬಿಡಬೇಕಾದರೆ ರೂ.5 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಡಿ.13 ರಂದು ಬಾಲಕನ ಕುಟುಂಬದಲವರು ರೂ.40,000 ನೀಡಿದ್ದಾರೆ. ನಂತರ ಡಿ.15 ರಂದು ಮತ್ತೆ ಕುಟುಂಬಕ್ಕೆ ಕರೆ ಮಾಡಿದ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದ್ದಾರೆ.

ಬಳಿಕ ಬಾಲಕನ ತಂದೆ ಬೆಂಗಳೂರಿಗೆ ಬಂದು ಯಶವಂತಪುರ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಭಾತ್ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಬಾಲಕನನ್ನು ವಿವಿಧ ಜಿಲ್ಲೆಗಳಲ್ಲಿರುವ ತಮ್ಮ ಪರಿಚಯಸ್ಥರ ಮನೆಗೆ ಸ್ಥಳಾಂತರಿಸುತ್ತಿದ್ದರು. ನೆಲಮಂಗಲದ ಲಾಡ್ಜ್'ಗೂ ಕರೆದೊಯ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಹಣವನ್ನು ಫೋನ್ ಪೇ ಮಾಡಿದ್ದ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದ್ದಾರೆ. ಇದರಂತೆ ಡಿ.16 ರಂದು ನಿಡಗುಂದಿ ರೈಲ್ವೇ ನಿಲ್ದಾಣದಲ್ಲಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಇದೇ ವೇಳೆ ಮೂವರು ಅಪಹರಣಕಾರರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಪ್ರಭಾತ್ (21), ರಂಗನಾಥ್ (18), ಕುಶಾಲ್ (18) ಎಂದು ಗುರ್ತಿಸಲಾಗಿದೆ. ಬಂಧಿತರ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

SCROLL FOR NEXT