ರಾಜ್ಯ

ಚೀನಾ ಭಾರತವನ್ನು ಪ್ರವೇಶಿಸಿದಂತೆಯೇ ನಾವೂ ಕರ್ನಾಟಕದ ಗಡಿ ನುಗ್ಗುತ್ತೇವೆ: ಗಡಿ ವಿವಾದ ಕುರಿತು ಸಂಜಯ್ ರಾವತ್ ಉದ್ಧಟತನ

Manjula VN

ನವದೆಹಲಿ: ಚೀನಾ ಭಾರತವನ್ನು ಪ್ರವೇಶಿಸಿದಂತೆಯೇ ನಾವೂ ಕರ್ನಾಟಕದ ಗಡಿ ನುಗ್ಗುತ್ತೇವೆಂದು ಗಡಿ ವಿವಾದ ಸಂಬಂಧ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಉದ್ಧಟತನದ ಮಾತುಗಳನ್ನು ಆಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಶಕಗಳಷ್ಟು ಹಳೆಯದಾದ ಗಡಿ ವಿವಾದವನ್ನು ಚರ್ಚೆಯ ಮೂಲಕ ಪರಿಹರಿಸಲು ನಾವು ಬಯಸುತ್ತಿದ್ದೇವೆ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "ಬೆಂಕಿ ಹೊತ್ತಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ, ಈ ವಿಷಯದಲ್ಲಿ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಚೀನಾ ಭಾರತದ ಗಡಿ ಪ್ರವೇಶಿಸಿದಂತೆಯೇ ನಾವೂ ಕರ್ನಾಟಕದ ಗಡಿ ನುಗ್ಗುತ್ತೇವೆ. ನಮಗೆ ಯಾರ ಅನುಮತಿಯ ಅಗತ್ಯವಿಲ್ಲ, ನಾವು ಅದನ್ನು ಚರ್ಚೆಯ ಮೂಲಕ ಪರಿಹರಿಸಲು ಬಯಸುತ್ತೇವೆ. ಆದರೆ, ಕರ್ನಾಟಕದ ಸಿಎಂ ಬೆಂಕಿ ಹಚ್ಚುತ್ತಿದ್ದಾರೆಂದಿದ್ದಾರೆ.

ಗಡಿ ವಿಷಯದಲ್ಲಿ ಮಹಾರಾಷ್ಟ್ರ ಕಾಲು ಕೆರೆದು ಜಗಳವಾಡುತ್ತಿದೆ. ಅಲ್ಲಿನ ಸಚಿವರು, ಸಂಸದರು ಕರ್ನಾಟಕದ ಗಡಿಗೆ ಭೇಟಿ ನೀಡಿ ಮರಾಠಿಗರನ್ನು ಪ್ರಚೋದಿಸಲು ಯತ್ನಿಸಿದರು. ಅದಕ್ಕೆ ಅವಕಾಶವಾಗದಂತೆ ಬೆಳಗಾವಿ ಜಿಲ್ಲಾಧಿಕಾರಿ ಮಹಾರಾಷ್ಟ್ರ ರಾಜಕಾರಣಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿದರು. ನಂತರ ಸಂಸದರೊಬ್ಬರು ತಾವು ಬೆಳಗಾವಿಗೆ ಭೇಟಿ ನೀಡಲಿದ್ದು ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅದಕ್ಕೂ ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಈ ವೇಳೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮಹಾಮೇಳವಾ ನಡೆಸಲು ಮುಂದಾಗಿತ್ತು. ಜಿಲ್ಲಾಡಳಿತ ಅದಕ್ಕೂ ಅನುಮತಿ ನೀಡಲಿಲ್ಲ.

ಅತ್ತ ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅಲ್ಲಿಯೂ ಗಡಿ ವಿವಾದ ಕುರಿತು ಭಾರೀ ಚರ್ಚೆಗಳಾಗುತ್ತಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಹದ್ದು ಮೀರಿದ ಟೀಕೆಗಳು ಕೇಳಿ ಬರುತ್ತಿವೆ. ಈಗ ಸಂಜಯ್ ರಾವತ್ ಕರ್ನಾಟಕಕ್ಕೆ ನುಗ್ಗುವ ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದೆ.

SCROLL FOR NEXT