ರಾಜ್ಯ

ಮಂಗಳೂರು: ಚೂರಿ ಇರಿತಕ್ಕೊಳಗಾಗಿದ್ದ ವರ್ತಕ ಜಲೀಲ್ ಸಾವು; 4 ಠಾಣೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

Manjula VN

ಮಂಗಳೂರು: ಸುರತ್ಕಲ್ ಠಾಣೆ ವ್ಯಾಪ್ತಿಯ ಕೃಷ್ಣಾಪುರದಲ್ಲಿ ವರ್ತಕ ಜಲೀಲ್ ಅವರನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.

ಬಜಪೆ, ಸುರತ್ಕಲ್, ಕಾವೂರು, ಪಣಂಬೂರು ಠಾಣೆಗಳ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಆದೇಶ ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ 6ರಿಂದ ಇದೇ 27ರಂದು ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇರುವ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಕಚೇರಿಗಳ ಕೆಲಸದ ಪಾಳಿಯನ್ನು ಸಂಜೆ 6ಕ್ಕೆ ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ರಾತ್ರಿ 6ರ ನಂತರದ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನಗತ್ಯವಾಗಿ ರಸ್ತೆಗಳಲ್ಲಿ ಅಡ್ಡಾಡದಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇದೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಇದೇ 27ರಂದು ಬೆಳಿಗ್ಗೆ 10ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ನಗರ ಪೊಲೀಸ್ ಕಮಿಷನರ್ ಕೋರಿದ್ದಾರೆ.

ಜಲೀಲ್ ಅವರು ಕೃಷ್ಣಾಪುರದಲ್ಲಿ ಹೊಂದಿದ್ದ ಅಂಗಡಿಗೆ ನುಗ್ಗಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಶನಿವಾರ ರಾತ್ರಿ ಅವರಿಗೆ ಚೂರಿಯಿಂದ ಇರಿದಿದ್ದರು. ತಕ್ಷಣವೇ ಅಕ್ಕ ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಸೇರಿ ಗಾಯಾಳು ಜಲೀಲ್ ಅವರನ್ನು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಅವರು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದರು.

SCROLL FOR NEXT