ರಾಜ್ಯ

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು

Ramyashree GN

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಸಹೋದರ ಮತ್ತು ಅವರ ಕುಟುಂಬ ಸದಸ್ಯರು ಗಾಯಗೊಂಡಿರುವ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎನ್. ಸತ್ಯನಾರಾಯಣ ಎಂಬುವವರ ವಿರುದ್ಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಬೆಂಗಾವಲು ಪಡೆಯ ಸಿಬ್ಬಂದಿ ಎಸ್. ಮಹದೇವ ದೂರು ದಾಖಲಿಸಿದ್ದರು. ಆರೋಪಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 27 ರಂದು ಮೈಸೂರು ಜಿಲ್ಲೆಯ ಕಡಕೋಳ ಗ್ರಾಮದ ಬಳಿ ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು.

ಪ್ರಹ್ಲಾದ್ ಮೋದಿ ಮತ್ತು ಅವರ ಕುಟುಂಬ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರವಾಸಿ ತಾಣ ಬಂಡೀಪುರ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

70 ವರ್ಷದ ಪ್ರಹ್ಲಾದ್ ಮೋದಿ, ಅವರ ಮಗ ಮೆಹುಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿನಾಲ್ ಮೋದಿ ಮತ್ತು 6 ವರ್ಷದ ಮೊಮ್ಮಗ ಮೆನತ್ ಮೆಹುಲ್ ಮೋದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಆರೋಪಿ ಚಾಲಕ ಸತ್ಯನಾರಾಯಣ ಅವರಿಗೂ ಗಾಯಗಳಾಗಿವೆ.

ಸತ್ಯನಾರಾಯಣ ಅವರ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

SCROLL FOR NEXT