ರಾಜ್ಯ

ಒಂದೇ ದಿನ ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನ: ಇಡೀ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ ಎಂದ ಸಿಎಂ ಬೊಮ್ಮಾಯಿ

Lingaraj Badiger

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಮತ್ತು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರನ್ನು ಸೋಮವಾರ ಬಂಧಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ತನಿಖೆ ಇದ್ರೂ ಕಾನೂನಿನ ಪ್ರಕಾರವೇ‌ ನಡೆಯುತ್ತೆ. ಈ‌ ಮಾತನ್ನು ನಾನು ಆಗಲೇ ಹೇಳ್ತಿದ್ದೆ. ಯಾರ ಬಗ್ಗೆಯೂ ಮುಲಾಜಿಲ್ಲ. ಯಾವ ಹಂತದಲ್ಲಿ ಸಾಕ್ಷಿ ಆಧಾರ ಇಟ್ಕೊಂಡು ಕ್ರಮ ತಗೋಬೇಕೋ ಆ ಕೆಲಸವನ್ನು ತನಿಖಾಧಿಕಾರಿಗಳು ಮಾಡ್ತಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಿ ಈ ಕ್ರಮ ಆಗ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಇದನ್ನು ಓದಿ: 5 ಲಕ್ಷ ರೂ. ಲಂಚ ಪಡೆದ ಪ್ರಕರಣ: ಎಸಿಬಿಯಿಂದ ಐಎಎಸ್ ಅಧಿಕಾರಿ ಮಂಜುನಾಥ್ ಬಂಧನ

ಇಂದು ಕಬ್ಬನ್ ಪಾರ್ಕ್‍ನ ಸರ್ಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ, ಯಾವುದೇ ತನಿಖೆ ನಡೆದಿರಲಿಲ್ಲ ಎಂದರು.

ಅಮೃತ್ ಪೌಲ್ ಬಂಧನದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದ್ದೆ. ಆ ಕೆಲಸವನ್ನು ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಬೇರೆ ಯಾವುದೇ ಸರ್ಕಾರ ಇದ್ದರೂ ಈ ಕೆಲಸ ಮಾಡುತ್ತಿರಲಿಲ್ಲ ಎಂದು ಸಿಎಂ ಹೇಳಿದ್ದಾರೆ.

SCROLL FOR NEXT