ರಾಜ್ಯ

ನಿವೃತ್ತ ನೌಕರರಿಗೂ ಆರೋಗ್ಯ ಸಂಜೀವಿನಿ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

Shilpa D

ಬೆಂಗಳೂರು: ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ನಗದು ರಹಿತ ‘ಆರೋಗ್ಯ ಸಂಜೀವಿನಿ’ ಯೋಜನೆ ಯನ್ನು 4.30 ಲಕ್ಷ ನಿವೃತ್ತರು, 1 ಲಕ್ಷ ಪಿಂಚಣಿದಾರರಿಗೂ ಅನ್ವಯಿಸಲು ಕ್ರಮಕೈಗೊಳ್ಳಲಾಗುವುದು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೌಕರರು ಮತ್ತು ನಿವೃತ್ತರು ಸರ್ಕಾರದ‌ ಎರಡು ಕಣ್ಣು. 6 ಲಕ್ಷ ಸರ್ಕಾರಿ ನೌಕರರನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನಿವೃತ್ತರಿಗೂ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.

‘ಬಹುತೇಕ ನೌಕರರು ಅಂತಃಕರಣ ಮರೆತಿದ್ದಾರೆ. ಸಹಿ ಹಾಕಿ ಹೋಗುವ ಚಟ ಬೆಳೆಸಿಕೊಂಡ ಕೆಲವರು ಮಾನಸಿಕವಾಗಿ ನಿವೃತ್ತರಾಗಿದ್ದಾರೆ. ಬಡವರು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಹೃದಯದಲ್ಲಿ ಕರುಣೆ ಇರಬೇಕು‘ ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ರಾಜ್ಯದಲ್ಲಿ 4.2 ಲಕ್ಷ ಪಿಂಚಣಿದಾರರಿದ್ದು, 1.5 ಲಕ್ಷ ಕುಟುಂಬ ಪಿಂಚಣಿ (ಮೃತ ನಿವೃತ್ತ ನೌಕರರ ಪತ್ನಿ) ಪಡೆಯುತ್ತಿದೆ. ಉಚಿತ ಆರೋಗ್ಯ ಯೋಜನೆ ಅಡಿ ನೌಕರರು 1,250 ಕಾಯಿಲೆಗಳಿಗೆ ನಗದು ರಹಿತವಾಗಿ ಸೇವೆ ಪಡೆಯಬಹುದಾಗಿದೆ. ನಿವೃತ್ತರಿಗೂ ಯೋಜನೆ ಅನ್ವಯಿಸಬೇಕು ಎಂದು ಕೋರಿದರು.

70 ವರ್ಷ ಮೇಲ್ಪಟ್ಟವರಿಗೆ ಪಿಂಚಣಿಯನ್ನು ಶೇ 10 ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು. ಪ್ರಸ್ತುತ, ಕೇಂದ್ರ ಸರ್ಕಾರದ ನಿವೃತ್ತ ನೌಕರರು ಆರೋಗ್ಯ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ.

SCROLL FOR NEXT