ರಾಜ್ಯ

ಕಲಬುರಗಿ: ಸ್ಥಳ ಮಹಜರು ವೇಳೆ ಲೇಡಿ PSI ಗೆ ಗುಂಡೇಟು; ಕೊಲೆ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

Srinivasamurthy VN

ಕಲಬುರಗಿ: ಕೊಲೆ ಪ್ರಕರಣದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆತಂದಿದ್ದ ವೇಳೆ ಆತ ಅಧಿಕಾರಿ ಮೇಲೆಯೇ ಗುಂಡು ಹಾರಿಸಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಬುರಗಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯ ಪ್ರಮುಖ ಆರೋಪಿ ವಿಜಯ ಹಳ್ಳಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶಹಬಾದ್ ಪಟ್ಟಣದ ಹೊರವಲಯದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯಲ್ಲಿ‌ ಪಿಎಸ್ಐ ಸುವರ್ಣಾ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿ ಎಸ್ಪಿ ಇಶಾ ಪಂತ್ ಅವರು ಆಸ್ಪತ್ರೆಗೆ ಭೇಟಿ ನೀಡಿ  ಪಿಎಸ್‌ಐ ಸುವರ್ಣಾ ಅವರ ಆರೋಗ್ಯ ವಿಚಾರಿಸಿದರು.

ಏನಿದು ಘಟನೆ?
ಜುಲೈ 11ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆ ನಡೆದಿತ್ತು. ಪ್ರಕರಣದ ಆರೋಪಿ ವಿಜಯ್ ನನ್ನು ಶುಕ್ರವಾರ ಬಂಧಿಸಿದ ಪೊಲೀಸರು. ಇಂದು ಬೆಳಗ್ಗೆ 7-30ರ ಸುಮಾರಿಗೆ ಕೊಲೆಗೆ ಬಳಸಿದ ಮಾರಕಾಸ್ತ್ರವೊಂದನ್ನು ಬಿಸಾಡಿದ ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಈ ವೇಳೆ ತಾನು ಅಡಗಿಸಿಟ್ಟುಕೊಂಡಿದ್ದ ರಿವಾಲ್ವರ್ ತೋರಿಸಿದ ಆರೋಪಿ, ಅದೇ ರಿವಾಲ್ವರ್ ನಿಂದ ಪಿಎಸ್ಐ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ತನಿಖಾಧಿಕಾರಿಯಾದ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ವಿಜಯಗೆ ಶರಣಾಗುವಂತೆ ಹೇಳಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನ ಮುಂದುವರೆಸಿದಾಗ ಆರೋಪಿಯ ಬಲಗಾಲಿಗೆ ಒಂದು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಎರಡು ವರ್ಷದ ಹಿಂದೆ ಗಿರೀಶ ಕಂಬಾನೂರ ಅಣ್ಣ ಸತೀಶ ಕೊಲೆಯನ್ನೂ ಕೂಡ ಇದೇ ಆರೋಪಿ ಮಾಡಿದ್ದ ಎನ್ನಲಾಗಿದೆ. ಕೊಲೆ ನಂತರ ಜೈಲಿನಿಂದಲೇ ಕಂಬಾನೂರ ಕುಟುಂಬಕ್ಕೆ ಬೆದರಿಕೆ ಹಾಕುವುದು ಸೇರಿದಂತೆ ವಿಜಯ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.

SCROLL FOR NEXT