ರಾಜ್ಯ

40 ಲೋನ್ ಆ್ಯಪ್ ಗಳಲ್ಲಿ ಸಾಲ: ಮರುಪಾವತಿಸಲು ಆಗದೆ, ಕಿರುಕುಳ ಸಹಿಸಲು ಆಗದೆ ವ್ಯಕ್ತಿ ಆತ್ಮಹತ್ಯೆ

Shilpa D

ಬೆಂಗಳೂರು: 40 ಲೋನ್ ಆ್ಯಪ್‌ಗಳ ಮೂಲಕ ಪಡೆದ ಸಾಲವನ್ನು ಮರುಪಾವತಿಸಲಾಗದೆ, ಕಿರುಕುಳ ತಾಳಲಾರದೆ 55 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಸೋಮವಾರ ಬೆಳಗ್ಗೆ ಸಿಟಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಗೇರಿ ಬಳಿ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗದೇವನಹಳ್ಳಿ ನಿವಾಸಿ ನಂದಕುಮಾರ್ ಎಂದು ಗುರುತಿಸಲಾಗಿದೆ. ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿ ಗೌರಿ ತಿಳಿಸಿದ್ದಾರೆ.

ಮೃತ ನಂದಕುಮಾರ್ ಡೆತ್ ನೋಟ್ ಬರೆದಿಟ್ಟಿದ್ದಾರೆ, ತಾನು 40 ಲೋನ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದು, ಅದರಲ್ಲಿ ಒಂದು ಆ್ಯಪ್ ನಿಂದ 3 ಸಾವಿರ ಹಾಗೂ ಉಳಿದ ಆ್ಯಪ್ ನಿಂದ ಗರಿಷ್ಠ ಎಂದರೆ 16 ಸಾವಿರ ರು ತೆಗೆದುಕೊಂಡಿದ್ದೇನೆ, ಆದರೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಕಿರುಕುಳ ಹೆಚ್ಚಾಯಿತು ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅವರ ವೈವಾಹಿಕ ಜೀವನ ಕೂಡ ಸಮಸ್ಯೆಯಲ್ಲಿ ಸಿಲುಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲ ನೀಡಿದ್ದವರು ನಂದ ಕುಮಾರ್‌ಗೆ ಮಾರ್ಫ್ ಮಾಡಿದ ಚಿತ್ರಗಳನ್ನು ಕಳುಹಿಸಿ ಪೋರ್ನ್ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಇದರ ಜೊತೆಗೆ ನಂದಕುಮಾರ ಅವರ ಫೋನ್ ನಲ್ಲಿದ್ದ ಕಾಂಟಾಕ್ಟ್  ನಂಬರ್ ಗಳಿಗೆ ಅಶ್ಲೀಲ ಸಂದೇಶಗಳು ಮತ್ತು ಅಶ್ಲೀಲ ವಿಷಯವನ್ನು ಕಳುಹಿಸುತ್ತಿದ್ದರು, ಇದನ್ನು ನಂದಕುಮಾರ್ ಅವರೇ ಕಳುಹಿಸಿದ್ದಾರೆ ಎಂದು ಕಾಣುವಂತೆ ಮಾಡಿದ್ದರು. ಸಿಟಿ ರೈಲ್ವೇ ಪೊಲೀಸರು ಕೆಲವು ಶಂಕಿತರನ್ನು  ಪತ್ತೆ ಮಾಡಿದ್ದಾರೆ.

ಸಂತ್ರಸ್ತನ ವೈಯಕ್ತಿಕ ವಿವರಗಳು ಸಾಲ ನೀಡಿದವರಿಗೆ ಹೇಗೆ ದೊರೆಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯು ತನ್ನ ಎಲೆಕ್ಟ್ರಾನಿಕ್ ಸಾಧನಗಳಿಗೆ ಪ್ರವೇಶವನ್ನು ನೀಡುವ ಕೆಲವು ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಕೇಳುವ ಮೂಲಕ ನಂದಕುಮಾರ್ ಅವರಿಗೆ ವಂಚಿಸಿದ್ದಾರೆ ಎಂದು ಹೇಳಿದರು ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ. ಲಿಂಕ್ ಮೂಲಕ ಸಂತ್ರಸ್ತನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಸ್ನೇಹಿತರ ಸಂಪರ್ಕ ಪಡೆದು ವಂಚಿಸಿದ್ದಾರೆ, ಹೀಗಾಗಿ ಇಂತಹ ಸಾಲದ ಆಮೀಷಗಳಿಗೆ ಬಲಿಯಾಗರಬಾರದೆಂದು ಪೊಲೀಸರು ಸಲಹೆ ನೀಡಿದ್ದಾರೆ.

SCROLL FOR NEXT