ರಾಜ್ಯ

ಮಂಗಳೂರು: ನಾಳೆ ಶಾಂತಿ ಸಭೆ, ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟು ಬಂದ್

Lingaraj Badiger

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಗುರುವಾರ ರಾತ್ರಿ ಮತ್ತೊಂದು ಹತ್ಯೆ ನಡೆದಿದ್ದು, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಜಿಲ್ಲಾಡಳಿತ ಶನಿವಾರ ಶಾಂತಿ ಸಭೆ ಆಯೋಜಿಸಿದೆ ಮತ್ತು ಜಿಲ್ಲೆಯಲ್ಲಿ ಆಗಸ್ಟ್ 1 ರ ವರೆಗೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಂದ್ ಮಾಡಲು ಆದೇಶಿಸಿದೆ.

ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಮೂರು ದಿನ ಕಠಿಣ ಪರಿಸ್ಥಿತಿ ಇದೆ. ಹೀಗಾಗಿ ಆಗಸ್ಟ್ 1 ರ ವರೆಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತದೆ. ನಗರ ವ್ಯಾಪ್ತಿಗೂ ಬಂದ್ ಆದೇಶ ಅನ್ವಯವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು ತಿಳಿಸಿದ್ದಾರೆ.

ಇದು ನೈಟ್ ಕರ್ಫ್ಯೂ ಅಲ್ಲ, ಬದಲಾಗಿ ಜನ ಕಡಿಮೆ ಮಾಡಿ ಪೊಲೀಸರಿಗೆ ಶಾಂತಿ ಸುವ್ಯವಸ್ಥಿತೆ ಕಾಪಾಡುವ ಉದ್ದೇಶವಾಗಿದೆ. ಅಗತ್ಯ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಸಿನಿಮಾ ಶೋ ಬಂದ್ ಮಾಡಲು ಸೂಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಸಭೆ ಸಮಾರಂಭ ಮಾಡುವಂತೆ ಇಲ್ಲ, ಆಯೋಜಕರಿಗೆ ಸೂಚನೆ ನೀಡಲಾಗಿದೆ. ರಾತ್ರಿ ಅಗತ್ಯ ಪ್ರಯಾಣ ಮಾಡುವವರು ಟಿಕೆಟ್ ಗಳನ್ನು ತೋರಿಸಿ ಪ್ರಯಾಣ ಮಾಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶಾಂತಿ ಸಭೆ ನಡೆಸಲಾಗುತ್ತಿದೆ. ಪೊಲೀಸ್ ಹಿರಿಯ ಅಧಿಕಾರಿಗಳು, ವಿವಿಧ ಧರ್ಮಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಲಹೆ ಸೂಚನೆಗಳನ್ನು ಎಲ್ಲರಿಂದ ಪಡೆಯಲಾಗುತ್ತದೆ. ಜಿಲ್ಲಾಡಳಿತದ ಮುಂದಿನ ನಿಯಮ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಡಾ. ಕೆವಿ ರಾಜೇಂದ್ರ ಅವರು ತಿಳಿಸಿದ್ದಾರೆ.

SCROLL FOR NEXT