ರಾಜ್ಯ

ಸುರತ್ಕಲ್ ಫಾಜಿಲ್ ಹತ್ಯೆ: ಐದು ಆರೋಪಿಗಳ ಬಂಧನ, ಕಾರು ವಶಕ್ಕೆ

Srinivasamurthy VN

ಮಂಗಳೂರು: ದಕ್ಷಿಣ ಕನ್ನಡದ ಸುರತ್ಕಲ್​ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಜುಲೈ 28ರ ರಾತ್ರಿ ಯುವಕ ಫಾಜಿಲ್​ನ ಕೊಲೆಗೈದಿದ್ದ (Murder) ಆರೋಪದ ಮೇರಗೆ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಪರಾರಿಯಲ್ಲಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವೆಸಿದ್ದಾರೆ.

ಅಂತೆಯೇ ಕೊಲೆಗೆ ಆರೋಪಿಗಳನ್ನ ಕರೆತಂದಿದ್ದ ಕಾರು ಚಾಲಕನನ್ನೂ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಮೊದಲು ಘಟನಾ ಸ್ಥಳಕ್ಕೆ ಬಂದಿದ್ದ ಕಾರನ್ನು ಗುರುತಿಸಿದ್ದು, ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರಲ್ಲಿ ಬಿಳಿ ಬಣ್ಣದ ಕಾರುಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಆರೋಪಿಗಳು ಕೊಲೆ ನಡೆದ 500 ಮೀಟರ್ ದೂರದಲ್ಲಿ ಕಾರು ಪಾರ್ಕ್ ಮಾಡಿದ್ದರು. ಪಾರ್ಕ್‌ ಮಾಡಿ ಕಾರಿನಲ್ಲಿ ಮಂಕಿ ಕ್ಯಾಪ್ ಧರಿಸಿ ಕುಳಿತಿದ್ದರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಪ್ರಕರಣ ಸಂಬಂಧ ಈ ವರೆಗೂ 51 ಜನರನ್ನು ವಿಚಾರಣೆ ಮಾಡಿದ್ದೇವೆ. 10-12ಕ್ಕೂ ಹೆಚ್ಚು ಕಾರು ವಶಕ್ಕೆ ಪಡೆದು ತನಿಖೆ ಮಾಡಿದ್ದೇವೆ. ಸುರತ್ಕಲ್ ಹೊರವಲಯದಲ್ಲಿ ಅಜಿತ್ ವಶಕ್ಕೆ ಪಡೆದಿದ್ದೇವೆ. ಅಜಿತ್ ಒಂದಷ್ಟು ಮಾಹಿತಿ ಕೊಟ್ಟಿದ್ದಾನೆ. ಅಜಿತ್ ಜೊತೆ ಓರ್ವ ಆರೋಪಿ ಒಡನಾಟ ಹೊಂದಿದ್ದ. ಆರೋಪಿ ಹಲವು ಬಾರಿ ಕಾರು ತೆಗೆದುಕೊಂಡು ಹೋಗುತ್ತಿದ್ದ.  ಅದಕ್ಕಾಗಿ 10-12 ಕಾರು ವಶಕ್ಕೆ ಪಡೆದು ಪರಿಶೀಲಿಸಿದ್ದೇವೆ. ಹೀಗಾಗಿ ಪ್ರಕರಣಕ್ಕೆ ಹತ್ತಿರವಾದ ಎಲ್ಲ ಸಾಕ್ಷಿಗಳ ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
 

SCROLL FOR NEXT