ರಾಜ್ಯ

ಯೋಗ ದಿನಾಚರಣೆಗೆ ಮುನ್ನ ಬಹಿರಂಗಗೊಂಡ ಮೈಸೂರಿನ ಬಿಜೆಪಿ ನಾಯಕರ ಭಿನ್ನಮತ: ಮಾಧ್ಯಮಗಳ ಮುಂದೆ ಪ್ರತಾಪ್ ಸಿಂಹ-ರಾಮದಾಸ್ ಸಿಡಿಮಿಡಿ

Sumana Upadhyaya

ಮೈಸೂರು:  ಜೂನ್ 21 ಯೋಗ ದಿನಾಚರಣೆ ಕಾರ್ಯಕ್ರಮ ಈ ಬಾರಿ ಅರಮನೆ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಭಾಗವಹಿಸುತ್ತಿರುವುದು ವಿಶೇಷ. ಹೀಗಾಗಿ ಕಾರ್ಯಕ್ರಮಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆಯುತ್ತಿದೆ. 

ಈ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಯಾವುದೇ ಸಮಸ್ಯೆ ಆಗದಂತೆ ಯೋಗಭ್ಯಾಸ  ನಡೆಸಲು ಯೋಜನೆ ಹಾಕಿಕೊಳ್ಳುತ್ತಿದ್ದು, ಪ್ರಧಾನಿಗಳು ಮೈಸೂರಿಗೆ ಬರುವ ವಿಷಯ ಅಧಿಕೃತವಾಗುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.

ಆದರೆ ಕಾರ್ಯಕ್ರಮ ತಯಾರಿ, ಉಸ್ತುವಾರಿ, ಕಾರ್ಯಕ್ರಮದ ಮೈಲೇಜ್ ತೆಗೆದುಕೊಳ್ಳುವ ವಿಚಾರದಲ್ಲಿ ಬಿಜೆಪಿ ನಾಯಕರ ಮಧ್ಯೆ ಪೈಪೋಟಿ, ವೈಮನಸ್ಸು ಉಂಟಾಗಿದ್ದು ಅದು ಮಾಧ್ಯಮಗಳ ಮುಂದೆ ಬಹಿರಂಗವಾಗಿದೆ. ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಮಾಧ್ಯಮಗಳ ಮುಂದೆಯೇ ಜಟಾಪಟಿ ನಡೆಸಿದ ಘಟನೆ ಇಂದು ಅರಮನೆ ಆವರಣದಲ್ಲಿ ನಡೆದಿದೆ. 

ಯೋಗ ದಿನಾಚರಣೆಗೆ ಯೋಗ ತಾಲೀಮು ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ಆರಂಭಗೊಂಡಿದೆ. ಇಂದು ಬೆಳಗ್ಗೆ ಯೋಗ ತಾಲೀಮು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಪ್ರಧಾನಿಯೊಂದಿಗೆ ಪಾಲ್ಗೊಳ್ಳುವ ಯೋಗಪಟುಗಳ ಸಂಖ್ಯೆ ವಿಚಾರದಲ್ಲಿ ದ್ವಂದ್ವವಾಗಿದೆ.  7 ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ರಾಮದಾಸ್, ಏಳು ಅಲ್ಲ 13 ಸಾವಿರ ಅಂತ ಅಂದ್ರು ಹೀಗೆ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಪ್ರತಾಪ್ ಸಿಂಹ, "ನಾನು ಮಾತನಾಡುತ್ತಿದ್ದೇನೆ, ರಾಮದಾಸ್‌ ಜೀ ಸುಮ್ಮನಿರಬೇಕು" ಎಂದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್,  ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಸ್ಪಷ್ಟನೆ ವಿವರಣೆ ನೀಡಲು ಯತ್ನಿಸಿದೆ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾವು ತೆರೆ ಹಿಂದೆ ನಿಂತು ಕೆಲಸ ಮಾಡುವವರು ಎಂದು ಸ್ಪಷ್ಟನೆ ಜೊತೆಗೆ ಪರೋಕ್ಷವಾಗಿ ಸಂಸದರಿಗೆ ತಿರುಗೇಟು ನೀಡಿದರು.

ಕೆಲ ದಿನಗಳ ಹಿಂದೆ ಕೂಡ ಇದೇ ರೀತಿಯಾಗಿತ್ತು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ರಾಮದಾಸ್, ಯೋಗ ದಿನದಂದು ಲಕ್ಷಕ್ಕೂ ಅಧಿಕ ಜನರು ಏಕಕಾಲದಲ್ಲಿ ಅಭ್ಯಾಸ ಮಾಡುವ ಮೂಲಕ ದಾಖಲೆ ಬರೆಯೋಣ ಎಂದು ಹೇಳಿದ್ದರು. ರಾಮದಾಸ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಪ್ರತಾಪ್ ಸಿಂಹ, ಮೋದಿ ಅವರೇ ಬರುತ್ತಿರೋದು ಒಂದು ದಾಖಲೆ. ಏಳರಿಂದ ಎಂಟು ಸಾವಿರ ಜನ ಸೇರಿ ಅಚ್ಚುಕಟ್ಟಾಗಿ ಯೋಗಾಭ್ಯಾಸ ಮಾಡೋಣ ಅಂತ ಹೇಳಿದ್ದರು.

10 ಸಾವಿರಕ್ಕೂ ಹೆಚ್ಚು ಯೋಗಾಪಟುಗಳಿಂದ ಅಭ್ಯಾಸ: ಇಂದು ಮೈಸೂರು ಅರಮನೆ ಅಂಗಳದಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪೂರ್ವಾಭ್ಯಾಸ ನಡೆಸಲಾಯಿತು. ಚಲನ ಕ್ರಿಯೆ, ಯೋಗ, ಪ್ರಾಣಾಯಾಮಗಳ ಅಭ್ಯಾಸ ಮಾಡಲಾಯ್ತು. ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್‌.ಎ.ರಾಮದಾಸ್ ಪ್ರಮುಖರು ಭಾಗಿಯಾಗಿದ್ದರು. 

SCROLL FOR NEXT