ರಾಜ್ಯ

ರಸ್ತೆ ಗುಂಡಿಗಳ ಸ್ಥಿತಿಗತಿ ಕುರಿತು 2 ದಿನಗಳಲ್ಲಿ ಹೈಕೋರ್ಟ್'ಗೆ ವರದಿ ಸಲ್ಲಿಕೆ: ಬಿಬಿಎಂಪಿ

Manjula VN

ಬೆಂಗಳೂರು: ರಸ್ತೆ ಗುಂಡಿಗಳ ಸ್ಥಿತಿಗತಿಗಳ ಕುರಿತು ಎರಡು ದಿನಗಳಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವೀಂದ್ರ ಪಿಎನ್ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ 13,400 ಕ್ಕೂ ಹೆಚ್ಚು ಗುಂಡಿಗಳನ್ನು ಪತ್ತೆಯಾಗಿದ್ದು, ಭರ್ತಿ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಇನ್ನೂ 1,500 ಗುಂಡಿ ಮುಚ್ಚುವುದು ಬಾಕಿ ಉಳಿದಿವೆ. ಪ್ರತಿದಿನ ಹೊಸದಾಗಿ ಗುಂಡಿಗಳು ಪತ್ತೆಯಾಗುತ್ತಿದ್ದು, ಗುಂಡಿ ಮುಚ್ಚುವ ಕಾರ್ಯ ನಿರಂತರವಾಗಿ ನಡಯುತ್ತಿದೆ. ರಸ್ತೆಗಳಲ್ಲಿ ಗುಂಡಿಗಳು ಕಂಡು ಬಂದರೆ ಸಂಬಂಧಪಟ್ಟ ಎಂಜಿನಿಯರ್'ಗೆ ನೋಟಿಸ್ ನೀಡಿ, ಅಮಾನತುಗೊಳಿಸಲಾಗುವುದು ಎಂದು ಹೇಳಿದರು.

ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಬೇಕು. ಒಂದು ವೇಳೆ ವೈಜ್ಞಾನಿಕವಾಗಿ ಮುಚ್ಚದ ಗುಂಡಿಗಳು ಮತ್ತೆ ಸೃಷ್ಟಿಯಾದರೆ ಅಂತಹ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದಿಲ್ಲ. ಜೊತೆಗೆ ಗುಂಡಿಗಳನ್ನು ಮತ್ತೊಮ್ಮೆ ಮುಚ್ಚುವ ವೆಚ್ಚವನ್ನು ಗುತ್ತಿಗೆದಾರರೇ ಭರಿಸಬೇಕು ಎಂದು ತಿಳಿಸಿದರು.

ಪೈಥಾನ್ ಯಂತ್ರದಿಂದ ಗುಂಡಿ ಮುಚ್ಚುವ ವಿಚಾರದಲ್ಲಿ ಗುತ್ತಿಗೆದಾರರ ಮೇಲೆ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಹಲ್ಲೆ ಮಾಡಿದ್ದಾರೆಂಬ ಆರೋಪ ಕುರಿತಂತೆ ಇನ್ನೆರಡು ದಿನಗಳಲ್ಲಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಎಲ್ಲಾ ವಿಚಾರಣೆ ನಡೆಸಲಾಗಿದೆ ಎಂದರು.

SCROLL FOR NEXT