ರಾಜ್ಯ

ರೂಪಾ ಮೌದ್ಗಿಲ್ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್

Srinivasamurthy VN

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದದಲ್ಲಿ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ ದೊಡ್ಡ ರಿಲೀಫ್ ಸಿಕ್ಕಿದ್ದು ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹೌದು.. ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ನಿವೃತ್ತ ಡಿಜಿ ಸತ್ಯನಾರಾಯಣ ಎಚ್‌ಎನ್ ಸಲ್ಲಿಸಿದ್ದ  ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಮತ್ತು ವಿಶೇಷ ಸವಲತ್ತುಗಳನ್ನು ನೀಡಲು ಶಶಿಕಲಾ ಅವರಿಂದ ಲಂಚ ಪಡೆದುಕೊಂಡಿದ್ದಾರೆಂದು ಆರೋಪ ಮಾಡಿದ್ದ ಮಾಜಿ ಡಿಐಜಿ ರೂಪಾ ಹಾಗೂ ಎರಡು ಮಾಧ್ಯಮ ಸಂಸ್ಥಗಳ ವಿರುದ್ದ ನಿವೃತ್ತ ಡಿಜಿಪಿ ಹೆಚ್.ಎನ್.ಸತ್ಯನಾರಾಯಣ ರಾವ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಕೆಳಹಂತದ ನ್ಯಾಯಾಲಯವು ಅವರ ಅರ್ಜಿಯನ್ನು ಮಾನ್ಯ ಮಾಡಿತ್ತು. ಆದರೆ, ಹೈಕೋರ್ಟ್ ಮಾನ್ಯತೆಯನ್ನು ರದ್ದುಗೊಳಿಸಿದೆ. ಈ ಮೂಲಕ ಇಬ್ಬರು ಪೊಲೀಸ್ ಅಧಿಕಾರಿಗಳ ಜಗಳಕ್ಕೆ ಪೂರ್ಣವಿರಾಮ ಬಿದ್ದಿದೆ.

ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ರೂಪಾ ಮೌದ್ಗಿಲ್ ವರದಿಯಲ್ಲಿ ತಿಳಿಸಿದ್ದರು. ಅಲ್ಲದೆ, ಜೈಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದರು. ಈ ದೂರಿಗೂ ಮೊದಲು ಸರ್ಕಾರದ ಪೂರ್ವಾನುಮತಿ ಪಡೆಯದ ಹಿನ್ನೆಲೆ ನಿವೃತ್ತ IPS ಅಧಿಕಾರಿ ಸತ್ಯನಾರಾಯಣರಾವ್ ಡಿ. ರೂಪಾ ಮೌದ್ಗಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆ ಸಂದರ್ಭದಲ್ಲಿ ಕಾರಾಗೃಹ ಡಿಜಿಪಿ ಐಜಿಯಾಗಿದ್ದ ಹೆಚ್.ಎನ್. ಸತ್ಯನಾರಾಯಣ ರಾವ್ ವಿರುದ್ಧ ಕಾರಾಗೃಹ ಡಿಐಜಿ ಆಗಿದ್ದಾಗ ಡಿ. ರೂಪಾ ಪತ್ರ ಬರೆದಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪತ್ರದಲ್ಲಿ ಆರೋಪ ಮಾಡಿದ್ದರು. ಜಯಲಲಿತಾ ಆಪ್ತೆ ಶಶಿಕಲಾಗೆ ಅಡುಗೆಮನೆಯ ವಿಶೇಷ ಸವಲತ್ತು ನೀಡಲಾಗಿದೆ. 2 ಕೋಟಿ ಹಣ ಪಡೆದು ವಿಶೇಷ ಸವಲತ್ತು ಕಲ್ಪಿಸಲಾಗಿದೆ ಎಂದು ಅವರು ಪತ್ರದಲ್ಲಿ ಆರೋಪ ಮಾಡಿದ್ದರು.

ಕರೀಂ ಲಾಲಾ ತೆಲಗಿ ಸೇವೆಗೆ ಸಹಕೈದಿಗಳ ಬಳಕೆ ಬಗ್ಗೆಯೂ ರೂಪಾ ಆರೋಪ ಮಾಡಿದ್ದರು. ಈ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಜಿಪಿ ಐಜಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಹೆಚ್​ಎನ್​ ಸತ್ಯನಾರಾಯಣ ರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಡಿ. ರೂಪಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿಗಳ ನಡುವಿನ ಅಧಿಕೃತ ಪತ್ರ ವ್ಯವಹಾರ ಮಾನನಷ್ಟವಾಗುವುದಿಲ್ಲ ಎಂದು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?:
2017ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಗಹದ ಡಿಜಿಪಿಯಾಗಿದ್ದ ಸತ್ಯನಾರಾಯಣ ರಾವ್ ಜೈಲಿನಲ್ಲಿದ್ದ ವಿ.ಕೆ ಶಶಿಕಲಾ ಅವರಿಂದ 2 ಕೋಟಿ ರೂ. ಲಂಚ ಪಡೆದು ಅವರಿಗೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆಂದು ಡಿಐಜಿ ಡಿ. ರೂಪಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದು ಪೊಲೀಸ್ ಇಲಾಖೆ ಮತ್ತು ಆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. ಪೊಲೀಸ್ ಅಧಿಕಾರಿಯ ಮೇಲೆ ಮತ್ತೋರ್ವ ಪೊಲೀಸ್ ಅಧಿಕಾರಿಯೇ ಆರೋಪ ಹೊರಿಸಿದ್ದರಿಂದ ಪೊಲೀಸ್ ಇಲಾಖೆ ಮುಜುಗರಕ್ಕೊಳಗಾಗಿತ್ತು.

ಸತ್ಯನಾರಾಯಣ ರಾವ್ ಹೇಳಿದ್ದೇನು?: 
ಐಪಿಎಸ್ ಅಧಿಕಾರಿ ಡಿ. ರೂಪಾಗೆ ಕಾರಾಗೃಹದ ಕಾನೂನಿನ ಬಗ್ಗೆ ಏನು ಗೊತ್ತು? ಎರಡು ಕೋಟಿ ಲಂಚ ಪಡೆದಿದ್ದೇನೆಂದು ಅವರು ಮಾಡಿರುವ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ದ. ಬಾಯಿಗೆ ಬಂದಂತೆ ಬರೆದು, ಇಲಾಖೆಯ ಕಾನೂನು ಉಲ್ಲಂಘಿಸಿರುವುದರಿಂದ ರೂಪಾ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಡಿಜಿಪಿ ಸತ್ಯನಾರಾಯಣ ರಾವ್ ಆಗ್ರಹಿಸಿದ್ದರು. ಅಲ್ಲದೆ, ಅವರ ಬಗ್ಗೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ರೂಪಾ ಮೌದ್ಗಿಲ್, 17 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪರಪ್ಪನ ಅಗ್ರಹಾರದಲ್ಲಿ ಏನೇನು ನಡೆಯುತ್ತಿದೆ, ಕಾರಾಗೃಹದ ಕಾನೂನು ಏನು ಎನ್ನುವುದನ್ನು ಅರಿತೇ ನಾನು ವರದಿ ನೀಡಿದ್ದೇನೆ. ನಾನು ನೀಡಿರುವ ವರದಿಯನ್ನು ಪರಿಶೀಲನೆ ಮಾಡಲಿ ಎಂದು ಡಿಐಜಿ ರೂಪಾ ಮೌದ್ಗಿಲ್ ಸ್ಪಷ್ಟನೆ ನೀಡಿದ್ದರು.

SCROLL FOR NEXT