ರಾಜ್ಯ

ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Srinivas Rao BV

ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ ಒಪ್ಪಿಗೆ ನೀಡಲು ಮರು ಒತ್ತಾಯ ಮಾಡಲಾಗಿದೆ. 

ಇನ್ನೊಮ್ಮೆ ಸರ್ವೋಚ್ಚ ನ್ಯಾಯಾಲಯದಲ್ಲಿ  ಕೃಷ್ಣ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರದ ಬಗ್ಗೆ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಒತ್ತಡ ಹಾಕಬೇಕೆಂಬ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.  

ವಿತ್ತ ಸಚಿವರನ್ನು ಸಹ ಇಂದು ಭೇಟಿ ಮಾಡಲಾಯಿತು. 8633 ಕೋಟಿ  ರೂಗಳನ್ನು ರಾಜ್ಯಕ್ಕೆ 2 ವರ್ಷ ಸಮಯಾವಕಾಶವಿದ್ದರೂ ಬೇಗನೆ  ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಧನ್ಯವಾದಗಳನ್ನು ಹೇಳಿ ಕೆಲವು ಲೆಕ್ಕಪತ್ರಗಳನ್ನು ಸಮನ್ವಯಗೊಳಿಸಿ ಉಳಿಯುವ ಮೊತ್ತವನ್ನು ಬಿಡುಗಡೆ ಮಾಡಲು ಸಹ  ಒತ್ತಾಯಿಸಲಾಗಿದೆ ಎಂದರು. 

ಇಂದು ನಡೆದ ಜಿಎಸ್ ಟಿ ಸಚಿವ ಮಂಡಳಿ ಸಭೆಯಲ್ಲಿ 7 ರಾಜ್ಯಗಳ ಮಂತ್ರಿಗಳು ಭಾಗವಹಿಸಿದ್ದಾರೆ. ಇದೆ 27- 28 ರಂದು ನಡೆಯಲಿರುವ ಜಿಎಸ್.ಟಿ ಮಂಡಳಿ ಸಭೆಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಾಗುವುದು ಎಂದರು. 

ಆದಷ್ಟೂ ಬೇಗನೆ ಡಿಪಿಆರ್ ಅನುಮೋದನೆಯಾಗಬೇಕೆಂಬ ಕರ್ನಾಟಕದ ನಿಲುವನ್ನು ತಿಳಿಸಿ ಸಭೆಯಲ್ಲಿಟ್ಟು ಕೂಡಲೇ ಅನುಮೋದನೆ ನೀಡಬೇಕೆಂದು ಮರು ಒತ್ತಾಯಿಸಲಾಗಿದೆ ಎಂದರು. 

ಕಾನೂನು ಸುವ್ಯವಸ್ಥೆಗೆ ಕ್ರಮ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆ ಕುರಿತು ಪ್ರತಿಭಟನೆ ಗಳಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ  ನಿರಂತರವಾಗಿ ಕ್ರಮಗಳನ್ನು  ತೆಗೆದುಕೊಳ್ಳಲಾಗಿದೆ. ನಿನ್ನೆಯಷ್ಟೇ, ಡಿಜಿಪಿ, ಎಡಿಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರು, ಗೃಹ ಇಲಾಖೆ  ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲ, ಗಲಾಟೆಯಾಗಬಾರದು ಎಂದು ಸೂಚನೆ ನೀಡಿದ್ದೇನೆ ಎಂದರು. 

ಅಗ್ನಿಪಥ ಯೋಜನೆ ಸದ್ದುದ್ದೇಶದಿಂದ ಆಗಿದೆ. 17 ರಿಂದ 21 ಕಲಿಯುವ ವಯಸ್ಸು. ಮಿಲಿಟರಿ ತರಬೇತಿ ಪಡೆದ ವ್ಯಕ್ತಿತ್ವ ಹೊರಬಂದಾಗ ಅವರಿಗೆ ವಿವಿದೆಡೆ ವಿಪುಲವಾದ ಅವಕಾಶ ದೊರೆಯುತ್ತದೆ. ಇಂತಹ ಯಾವುದೇ ರೀತಿಯ ಅವಕಾಶಗಳು ಇರಲಿಲ್ಲ. ಕೇವಲ ಒಂದು ದೃಷ್ಟಿಯಿಂದ ನೋಡದೆ ಒಂದು ದೊಡ್ಡ ತರಬೇತಿ ಪಡೆದ ಯುವ ಸಮೂಹ ಹೊರಬಂದರೆ ಸಮಾಜ ಉಪಯೋಗವಾಗಲಿದೆ. ಹೀಗೆ ಹಲವಾರು ವಿಚಾರಗಳಿವೆ. ಕೇಂದ್ರ ಸರ್ಕಾದಿಂದಲೂ ಇನ್ನಷ್ಟು ಸ್ಪಷ್ಟೀಕರಣ ಬರಲಿದೆ ಎಂದರು.

SCROLL FOR NEXT