ರಾಜ್ಯ

ಅಗ್ನಿಪಥ್ ಪ್ರತಿಭಟನೆ ರಾಜಕೀಯ ಪ್ರೇರಿತ, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ: ಸಿಎಂ ಬೊಮ್ಮಾಯಿ ಆರೋಪ

Sumana Upadhyaya

ಬೆಂಗಳೂರು: ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಇಡೀ ದೇಶದಲ್ಲಿ ಮಾಡುತ್ತಿದೆ. ಅದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ. ಇಡೀ ಜಗತ್ತಿನಲ್ಲಿ ಅಗ್ನಿಪಥ ಎನ್ನುವುದು ವಿನೂತನ ಯೋಜನೆಯಾಗಿದ್ದು ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಯುವಕರು 17ರಿಂದ 21 ವರ್ಷದೊಳಗಿನವರು ಶಿಸ್ತಿನ ಉತ್ತಮವಾದ ಮಿಲಿಟರಿ ತರಬೇತಿಯನ್ನು ಪಡೆದರೆ ಬೇರೆ ಬೇರೆ ಅವಕಾಶ ಸಿಗುತ್ತದೆ. ಸಶಕ್ತವಾಗಿರುವ ಯುವಕರ ಜನಸಂಖ್ಯೆಯನ್ನು ಸಿದ್ಧತೆ ಮಾಡುವ ದೃಷ್ಟಿಯಿಂದ ಸೇನಾಪಡೆಯಲ್ಲಿ ಯುವಶಕ್ತಿಯನ್ನು ತರುವಂತಹ ಮಹಾತ್ವಾಕಾಂಕ್ಷಿ ಯೋಜನೆ ಎಂದರು.

ಈಗಾಗಲೇ ಪರೀಕ್ಷೆ ಬರೆದವರಿಗೆ ಆತಂಕವಿದೆ. ಅದನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಹಾರ ಕೊಡುವ ವಿಶ್ವಾಸವಿದೆ. ಆದರೆ ಈ ನೆಪದಲ್ಲಿ ಸಾರ್ವಜನಿಕ ಸ್ವತ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡುವುದು ಖಂಡಿತಾ ಕ್ಷಮಾಪಣೆಗೆ ಯೋಗ್ಯವಾದುದಲ್ಲ, ಇದರ ಹಿಂದೆ ರಾಜಕೀಯ ಪ್ರೇರಣೆ ಇರುವುದು ಸ್ಪಷ್ಟ. ಜನರು ಈ ಬಗ್ಗೆ ಸ್ವಲ್ಪ ದಿವಸದಲ್ಲಿಯೇ ಅರ್ಥ ಮಾಡಿಕೊಳ್ಳಲಿದ್ದಾರೆ ಎಂದರು.

ಪ್ರಧಾನಿ ಸ್ವಾಗತಕ್ಕೆ ಸಿದ್ದ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡು ದಿನಗಳ ಕಾರ್ಯಕ್ರಮಕ್ಕೆ ಕರ್ನಾಟಕಕ್ಕೆ ಬರುತ್ತಿದ್ದು, ನಾಳೆ ಪ್ರತಿಷ್ಠಿತ ಐಐಎಸ್ಸಿಯಲ್ಲಿ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭವಿದೆ. ಅದಾದ ಬಳಿಕ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಉದ್ಘಾಟನೆ, ವಿವಿಧ ರೈಲ್ವೆ ಮತ್ತು ನ್ಯಾಷನಲ್ ಹೈವೆ ಯೋಜನೆಗಳ ಉದ್ಘಾಟನೆ ಬೆಂಗಳೂರಿನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಆಗಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಉನ್ನತ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಕೂಡ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನಾಳೆ ಸಾಯಂಕಾಲ ಮೈಸೂರಿನಲ್ಲಿ ಸಾರ್ವಜನಿಕ ಸಭೆ, ಸುತ್ತೂರು ಮಠಕ್ಕೆ ಭೇಟಿ, ಚಾಮುಂಡಿ ಬೆಟ್ಟಕ್ಕೆ ಪ್ರಧಾನ ಮಂತ್ರಿಗಳ ಭೇಟಿ ನಿಗದಿಯಾಗಿದೆ. ಪ್ರಧಾನ ಮಂತ್ರಿಗಳು ಮುಖ್ಯವಾಗಿ ಬರುತ್ತಿರುವುದು ಯೋಗ ಕಾರ್ಯಕ್ರಮಕ್ಕೆ. 21ನೇ ತಾರೀಖು ಬೆಳಗ್ಗೆ ಮೈಸೂರು ಅರಮನೆ ಮುಂದೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೇರಳದ ತಿರುವನಂತಪುರಕ್ಕೆ ತೆರಳುತ್ತಾರೆ ಎಂದು ಮುಖ್ಯಮಂತ್ರಿ ವಿವರಿಸಿದರು.

SCROLL FOR NEXT