ರಾಜ್ಯ

ಪ್ರಹ್ಲಾದ್ ಜೋಶಿಗಾಗಿ ಒಂದು ಕುರ್ತಾ ತಯಾರಿಸಿ: ಮೈಸೂರಿನಲ್ಲಿ ಫಲಾನುಭವಿಗಳ ಜೊತೆ ಸಂವಾದದ ವೇಳೆ ಪ್ರಧಾನಿ ಹಾಸ್ಯ ಚಟಾಕಿ!

Shilpa D

ಮೈಸೂರು: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆಯ ವೇಳೆಗೆ ಮೈಸೂರಿಗೆ ತೆರಳಿದರು. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೂ ಮುನ್ನ ಹಳೆ ಮೈಸೂರು ವಿಭಾಗದಲ್ಲಿ ಕೇಂದ್ರದ ಯೋಜನೆಗಳಿಂದ ಲಾಭ ಪಡೆದುಕೊಂಡವರೊಂದಿಗೆ ಸಂವಾದ ನಡೆಸಿದರು.

ಮೈಸೂರಿನ ಮಹಾರಾಜ ಕಾಲೇಜ್ ಗ್ರೌಂಡ್ ನಲ್ಲಿ ನರೇಂದ್ರ ಮೋದಿ ಅವರು ನಾಗನಹಳ್ಳಿ ರೈಲ್ವೆ ನಿಲ್ದಾಣದ ಕೋಚಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆ ನೇರವೇರಿಸಿದರು ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರ ಸಮರ್ಪಣಾ ಸಮಾರಂಭದಲ್ಲಿ ಪಾಲ್ಗೋಂಡಿದ್ದರು.

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭವಿಗಳೊಬ್ಬರೊಂದಿಗೆ ಸಂವಾದದ ಸಂದರ್ಭದಲ್ಲಿ ಮಾತನಾಡಿದರು.  ನಾನು ಇಂಟರ್ ಮಿಡಿಯೇಟ್ ವಿದ್ಯಾಭ್ಯಾಸ ಮಾಡಿದ್ದು ತಾನು ಟೈಲರ್ ಕೆಲಸ ಮಾಡುತ್ತೇನೆ ಎಂದು ಹೇಳಿದರು. ತಮ್ಮದೇ ಹಳ್ಳಿಯಲ್ಲಿ ಟೈಲರಿಂಗ್ ತರಬೇತಿ ಪಡೆದುಕೊಂಡಿದ್ದಾಗಿ ತಿಳಿಸಿದರು. ಈ ವೇಳೆ ಆಕೆಯನ್ನು ಪ್ರಶ್ನಿಸಿದ ಮೋದಿ, ತಾವು ಹಾಕಿರುವ ರೀತಿಯ ಕುರ್ತಾ ಹೊಲಿಯಬಹುದೇ ಎಂದು ಕೇಳಿದಾಗ ಆಕೆ, ಖಂಡಿತವಾಗಿಯೂ ಹೊಲಿದು ಕೊಡುವುದಾಗಿ ತಿಳಿಸಿದರು.

"ಪ್ರಹ್ಲಾದ್ ಜೀಗಾಗಿ ಒಂದು ಕುರ್ತಾ ತಯಾರು ಮಾಡಿ" ಎಂದು ನಗುತ್ತಾ ತಮ್ಮ ಪಕ್ಕದಲ್ಲಿ ಕುಳಿತಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಪ್ರಧಾನಿ ಮೋದಿ ತೋರಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮನೆಗೆ ವಿದ್ಯುತ್ ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿವೆಯೇ ಎಂದು ಕೇಳಿದರು. ಇದಕ್ಕ ಹೌದು ಎಂದು ಫಲಾನುಭವಿಗಳು ಉತ್ತರಿಸಿದರು.

ಈ ವೇಳೆ ಪ್ರಧಾನಿ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇತರ ಯೋಜನೆಗಳಿಂದ ಲಾಭ ಪಡೆದುಕೊಂಡು ಸ್ವಂತ ಮನೆ ಕಟ್ಟಿಕೊಂಡ ಯಶೋದಾ ಎನ್ನುವ ಮಹಿಳೆಯು ಯೋಜನೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಮನೆಗೆ ನೀರಿ ಸಂಪರ್ಕವಿರಲಿಲ್ಲ. ಸರ್ಕಾರದ ಯೋಜನೆಯಿಂದಲೇ ಮನೆಗೆ ಸಂಪರ್ಕ ಸಿಕ್ಕಿದೆ. ಮನೆಯನ್ನೂ ಚೆನ್ನಾಗಿ ಕಟ್ಟಿಕೊಂಡಿದ್ದೇವೆ. ಇದಕ್ಕೂ ಸರ್ಕಾರದ ಸಹಾಯ ಸಿಕ್ಕಿತು ಎಂದರು.

ಈ ವೇಳೆ ಮಾತನಾಡಿದ ಮೋದಿ ಹಾಗಿದ್ದರೆ, ನಾನು ಮನೆಗೆ ಬಂದರೆ ನನಗೆ ಊಟ ಮಾಡಿ ಹಾಕ್ತೀರಾ ಎಂದು ಖುಷಿಯಿಂದಲೇ ಪ್ರಶ್ನೆ ಮಾಡಿದರು. ಇದಕ್ಕೆ ಮಹಿಳೆಯು, ಖಂಡಿತವಾಗಿ ಬನ್ನಿ, ನಿಮಗೆ ಏನು ಬೇಕೋ ಎಲ್ಲವನ್ನೂ ಮಾಡಿ ಹಾಕುತ್ತೇವೆ ಎಂದಾಗ ಮೋದಿ ಮುಖದಲ್ಲಿ ಯೋಜನೆಗಳು ಜನರಿಗೆ ಮುಟ್ಟಿದ ಸಂತೃಪ್ತಿ ಕಂಡಿತು.

ಅದರೊಂದಿಗೆ ಪಾಲ್ಗೊಂಡಿದ್ದ ಇತರ ಫಲಾನುಭವಿಗಳು, ಜಲಜೀವನ ಮಿಷನ್, ಆಯುಷ್ಮಾನ್ ಭಾರತ, ಮುದ್ರಾ ಯೋಜನೆ ಇವುಗಳಿಂದ ತಾವು ಪಡೆದ ಲಾಭದ ಬಗ್ಗೆ ಹೇಳಿಕೊಂಡರು. ಒಬ್ಬ ವ್ಯಕ್ತಿ ಬಹುತೇಕ ಎಲ್ಲಾ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದನ್ನು ಕೇಳಿದ್ದಾಗ, ನೀವು ಸರ್ಕಾರದ ಯಾವ ಯೋಜನೆಯನ್ನೂ ಬಿಟ್ಟಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

SCROLL FOR NEXT