ರಾಜ್ಯ

ಬೆಳಗಾವಿ: ಮಗನ ಪ್ರಾಣ ಉಳಿಸುವಂತೆ ಏಸುವಿನ ಮೊರೆ; ಶಿಲುಬೆ ಮುಂದೆ ಮಗುವನ್ನು ಮಲಗಿಸಿದ ದಂಪತಿ

Shilpa D

ಬೆಳಗಾವಿ: ಮಿದುಳು ಜ್ವರದಿಂದ ಬಳಲುತ್ತಿರುವ ಮಗನನ್ನು ಕಾಪಾಡುವಂತೆ ಕೋರಿ ನಂದಗಡದ ದಂಪತಿಯೊಬ್ಬರು ಏಸುವಿನ ಮೊರೆಹೋಗಿದ್ದಾರೆ.

ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಏಸುಕ್ರಿಸ್ತನ ಶಿಲುಬೆ ಮುಂದೆ ಮಂಗಳವಾರ ಬಾಲಕನನ್ನು ಮಲಗಿಸಲಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ದಂಪತಿಯ ಕಷ್ಟ ವಿಚಾರಿಸಿದರು. ‘ಬಾಲಕನಿಗೆ ಮಾರಣಾಂತಿಕ ಕಾಯಿಲೆ ಇದ್ದು, ದೇವರೇ ಕಾಪಾಡುತ್ತಾನೆ ಎಂದು ಇಲ್ಲಿಗೆ ಬಂದಿದ್ದಾಗಿ’ ದಂಪತಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ನಿವಾಸಿಗಳಾದ ಕೃಷ್ಣ ಸುತ್ರಾವೆ ಹಾಗೂ ಅಂಬಾ ದಂಪತಿಯ 8 ವರ್ಷದ ಪುತ್ರ ಶೈಲೇಶ ಮಿದುಳು  ಜ್ವರದಿಂದಾಗಿ ಪಾರ್ಶ್ವವಾಯು ಪೀಡಿತನಾಗಿದ್ದಾನೆ. ಹಲವು ಆಸ್ಪತ್ರೆಗಳಿಗೆ ಹೋಗಿ, ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಲಕ್ಷಾಂತರ ಹಣ ವ್ಯಯಿಸಿದ್ದಾರೆ. ಆದರೆ, ಇತ್ತೀಚೆಗೆ ಬಾಲಕನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ವೈದ್ಯರೂ ಕೈಚೆಲ್ಲಿದ್ದಾರೆ. ಇದರಿಂದ ದಿಕ್ಕು ತೋಚದಾದ ದಂಪತಿ ಏಸುವಿನ ಮೊರೆಹೋಗಿದ್ದಾಗಿ ತಿಳಿಸಿದರು.

ಕುಟುಂಬಸ್ಥರು ಆರು ದಿನ ಮನೆಯಲ್ಲಿ ಶೈಲೇಶ್‍ನನ್ನು ಇಟ್ಟುಕೊಂಡು ನಂದಗಡಕ್ಕೆ ಬಂದಿದ್ದಾರೆ. ಶಿಲುಬೆ ಎದುರು ಮಗುವನ್ನು ಮಲಗಿಸಿ ನನ್ನ ಮಗನನ್ನು ಬದುಕಿಸಿಕೊಡುವಂತೆ ದೇವರ ಮೊರೆ ಹೋಗಿದ್ದಾರೆ. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕುಟುಂಬಸ್ಥರು ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ನಂದಗಡ ಬೆಟ್ಟದಲ್ಲಿರುವ ಶಿಲುಬೆ ಐತಿಹಾಸಿಕ ಮಹತ್ವ ಪಡೆದಿದೆ. 1920ರಲ್ಲಿ ಪ್ಲೇಗ್ ಬಂದಾಗ ಪಾದ್ರಿಯೊಬ್ಬರು ಜನರನ್ನು ಇದೇ ಶಿಲುಬೆ ಇರುವ ಬೆಟ್ಟದ ಮೇಲೆ ಕರೆತಂದು ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಆ ಪ್ರಾರ್ಥನೆ ಫಲಿಸಿತು ಎಂಬ ಮಾತು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದು ಬಂದಿದೆ. ಹೀಗಾಗಿ, ಪ್ರತಿ ವರ್ಷ ಹಲವರು ತಮ್ಮ ಹರಕೆಗೆ ಇಲ್ಲಿಗೆ ಬರುವುದು ರೂಢಿ.

SCROLL FOR NEXT