ರಾಜ್ಯ

ಮೈಸೂರು: ಕಾಲೇಜು ಪ್ರಾಂಶುಪಾಲರಿಗೆ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಕಪಾಳಮೋಕ್ಷ!

Manjula VN

ಮೈಸೂರು: ಮಂಡ್ಯದ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಅವರು ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಮೇಲ್ದರ್ಜೆಗೇರಿದ ಐಟಿಐ ಕಾಲೇಜು ಉದ್ಘಾಟನೆ ವೇಳೆ ಶಾಸಕರು ಪ್ರಾಂಶುಪಾಲರಿಗೆ ಕಪಾಳಕ್ಕೆ ಹೊಡೆದಿದ್ದಾರೆಂದು ತಿಳಿದುಬಂದಿದೆ.

ಶ್ರೀನಿವಾಸ್ ಅವರು ಮೈಸೂರು-ಬೆಂಗಳೂರು ಹೆದ್ದಾರಿಯ ಮೈ ಶುಗರ್ ಹೈಸ್ಕೂಲ್ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಕಾಲೇಜಿಗೆ ಭೇಟಿ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಲೇಜಿನ ಕಟ್ಟಡ ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಇತರ ಸಿಬ್ಬಂದಿ ಮತ್ತು ಚುನಾಯಿತ ಪ್ರತಿನಿಧಿಗಳ ಮುಂದೆ ಪ್ರಾಂಶುಪಾಲ ನಾಗಾನಂದ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಶ್ರೀನಿವಾಸ್ ಅವರು ಕಾಲೇಜು ಕಟ್ಟಡ ಉದ್ಘಾಟಿಸಿದ ಬಳಿಕ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಕಾಲೇಜಿನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು. ಕಂಪ್ಯೂಟರ್ ಲ್ಯಾಬ್ ಪ್ರವೇಶ ದ್ವಾರದಲ್ಲಿ ಶಾಸಕರ ಬಳಿ ಜಾಗ ಇಲ್ಲದ ಕಾರಣ ನಾಗಾನಂದ ಸಿಬ್ಬಂದಿ ಹಿಂದೆ ನಿಂತಿದ್ದರು. ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ಕಾಲೇಜು ಸಿಬ್ಬಂದಿಯನ್ನು ಶಾಸಕರು ಕೇಳಿದಾಗ, ನಾಗಾನಂದ ಅವರು ಮುಂಭಾಗಕ್ಕೆ ಧಾವಿಸಿ ಸೌಲಭ್ಯಗಳನ್ನು ವಿವರಿಸಲು ಪ್ರಯತ್ನಿಸಿದರು.

ಇದರಿಂದ ಕೋಪಗೊಂಡ ಶಾಸಕರು ಅಶ್ಲೀಲ ಪದಗಳಿಂದ ನಿಂದಿಸಿ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ನಾಗಾನಂದ ಅವರು ತಮ್ಮ ಮುಖವನ್ನು ಮುಚ್ಚಿಕೊಂಡು ಸೌಲಭ್ಯಗಳ ವಿವರಗಳನ್ನು ವಿವರಿಸಲು ಪ್ರಯತ್ನಿಸಿದಾಗ, ಶಾಸಕರು ಇನ್ನೂ ಕೆಲವು ಬಾರಿ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಮಾಧ್ಯಮದವರು ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಜೆಡಿಎಸ್ ಮುಖಂಡರು ಶಾಸಕರನ್ನು ತಡೆದರು.

ಬಳಿಕ ಶ್ರೀನಿವಾಸ್ ಅವರು ಕಾಲೇಜಿನ ಎಲ್ಲಾ ವಿಭಾಗಕ್ಕೂ ಭೇಟಿ ನೀಡಿ ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡರು. ಘಟನೆ ಸಂಬಂಧ ಪ್ರಾಂಶುಪಾಲರಿಂದ ಯಾವುದೇ ದೂರು ದಾಖಲಾಗಿಲ್ಲ.

ಘಟನೆಯ ಕುರಿತು ಪ್ರಾಂಶುಪಾಲ ಪ್ರತಿಕ್ರಿಯೆ ನೀಡಿದ್ದು, ಶಾಸಕರು ತಮ್ಮ ಮೇಲೆ ಏಕೆ ಕೋಪಗೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ, ಮೇಲ್ದರ್ಜೆಗೇರಿದ ನೂತನ ಕಾಲೇಜಿನ ವಿವರವನ್ನು ಶಾಸಕರಿಗೆ ವಿವರಿಸಿದ್ದೇನೆ ಎಂದರು.

SCROLL FOR NEXT